ಬೆಂಗಳೂರು: ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಗರಿಷ್ಠ (Temperature) ಪ್ರಮಾಣ ದಾಖಲಾಗುತ್ತಿರುವ ಬೆನ್ನಲ್ಲೇ ಕುಡಿಯುವ ನೀರಿನ ಪೂರೈಕೆಯಲ್ಲಿ (Water Crisis) ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಬೆಂಗಳೂರು ಜಲಮಂಡಳಿ (BWSSB) ಅಲರ್ಟ್ ಆಗಿದೆ. ಹೀಗಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕೆಪಿಟಿಸಿಎಲ್ (KPTCL) ಹಾಗೂ ಬೆಸ್ಕಾಂ (Bescom) ಹಿರಿಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೇಸಿಗೆಯ ಆರಂಭದಿಂದಲೂ ನೀರು ಸರಬರಾಜಿನಲ್ಲಿ ಅಡಚಣೆಯ ಕುರಿತು ಹೆಚ್ಚಿನ ಸಂಖ್ಯೆಯ ದೂರುಗಳನ್ನು ಸ್ವೀಕರಿಸುತ್ತಿದೆ. ಈ ಬೆನ್ನಲ್ಲೇ ಸಮರ್ಪಕ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಜಲಮಂಡಳಿ, ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಹಿರಿಯ ಅಧಿಕಾರಿಗಳು ಈ ಸಮನ್ವಯ ಸಭೆಯಲ್ಲಿ ಭಾಗಿಯಾಗಿದ್ದು, ಬೆಂಗಳೂರಿಗೆ ನಿಯಮಿತವಾಗಿ ನೀರು ಸರಬರಾಜು ಮಾಡಲು ನಿರಂತರ ವಿದ್ಯುತ್ ಒದಗಿಸುವಂತೆ ಬಗ್ಗೆ ಚರ್ಚೆ ಮಾಡಲಾಗಿದೆ.
ಸಭೆಯಲ್ಲಿ ಚರ್ಚೆಯಾದ ವಿಷಯಗಳಿವು
- ವಿವಿಧ ಪಂಪಿಂಗ್ ಸ್ಟೇಷನ್‌ಗಳಲ್ಲಿ ಸುಮಾರು 110 ವಿದ್ಯುತ್ ವ್ಯತ್ಯಯ
- ವಿದ್ಯುತ್ ಕಡಿತವು ಅಲ್ಪಾವಧಿಗೆ ಆಗಿದ್ದರೂ, ದೊಡ್ಡ ಸಮಸ್ಯೆ ಎದುರಾಗಬಹುದು
- ಇತರ ನಿಲ್ದಾಣಗಳಲ್ಲಿ ಪೂರೈಕೆಯ ಮೇಲೆ ಏರಿಳಿತದ ಪರಿಣಾಮ
- ಪುನಃ ಆರಂಭಿಸುವ ಹೊತ್ತಿಗೆ ಬೆಂಗಳೂರಿನ ಕನಿಷ್ಠ 20% ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ
- ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಕ್ರಮ
- ದೂರುಗಳ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸಲು ದೃಢ ಕಾರ್ಯವಿಧಾನ
ಬಿಡ್ಲೂಎಸ್‌ಎಸ್‌ಬಿ ಒದಗಿಸಿದ ದತ್ತಾಂಶವು ಕಳೆದ ಮೂರು ತಿಂಗಳಲ್ಲಿ ವಿವಿಧ ಪಂಪಿಂಗ್ ಸ್ಟೇಷನ್‌ಗಳಲ್ಲಿ ಸುಮಾರು 110 ವಿದ್ಯುತ್ ಅಡೆತಡೆಗಳು ಸಂಭವಿಸಿವೆ. ಇದರಿಂದಾಗಿ ನಗರದಾದ್ಯಂತ ನೀರು ಸರಬರಾಜು ಅಡಚಣೆಯಾಗಿದೆ. ವಿದ್ಯುತ್ ಕಡಿತವು ಅಲ್ಪಾವಧಿಗೆ ಆಗಿದ್ದರೂ, ಮೂರು ಹಂತಗಳಲ್ಲಿ ನೀರನ್ನು ಪಂಪ್ ಮಾಡುವುದರಿಂದ ನೀರು ಸರಬರಾಜಿನಲ್ಲಿ ದೊಡ್ಡ ಸಮಸ್ಯೆ ಉಂಟಾಗುತ್ತದೆ.
ಇದು ಇತರ ನಿಲ್ದಾಣಗಳಲ್ಲಿ ಪೂರೈಕೆಯ ಮೇಲೆ ಏರಿಳಿತದ ಪರಿಣಾಮವನ್ನು ಉಂಟುಮಾಡುತ್ತದೆ. ನಾವು ಪಂಪ್‌ಗಳನ್ನು ಪುನಃ ಆರಂಭಿಸುವ ಹೊತ್ತಿಗೆ ಬೆಂಗಳೂರಿನ ಕನಿಷ್ಠ 20% ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತವೆ. ಬಿಡ್ಲುಎಸ್‌ಎಸ್‌ಬಿ ಅಧಿಕಾರಿಗಳು ಯಾವುದೇ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಸಾರ್ವಜನಿಕರು ಸ್ವೀಕರಿಸುವ ದೂರುಗಳ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸಲು ದೃಢವಾದ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವುದರ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: New GST Rules : ಜಿಎಸ್‌ಟಿಯ ಹೊಸ ನಿಯಮ ಇಂದಿನಿಂದ ಜಾರಿ, ಲಾಭವೇನು? ಇಲ್ಲಿದೆ ಡಿಟೇಲ್ಸ್
ಇನ್ನು ಬೇಸಿಗೆ ಮಾತ್ರವಲ್ಲದೇ ಎಲೆಕ್ಷನ್ ಇರುವುದರಿಂದ ನೀರಿನ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಕುಡಿಯುವ ನೀರಿನಲ್ಲಿ ಯಾವುದೇ ವ್ಯತ್ಯಯ ಆಗದಂತೆ ಕಟ್ಟೆಚ್ಚರ ವಹಿಸುವುದು ಜಲಮಂಡಳಿ ಮುಂದಿರುವ ಸವಾಲಾಗಿದೆ. ಹೀಗಾಗಿ ವಿದ್ಯುತ್ ಸಹ ಅತ್ಯವಶ್ಯಕವಾಗಿರುವುದರಿಂದ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಅಧಿಕಾರಿಗಳು ಜಲಮಂಡಳಿಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ.