Site icon Vistara News

Water Crisis: ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಿಸಿದ ಜಲಮಂಡಳಿ; ತಪ್ಪಿದರೆ 5000 ರೂ. ದಂಡ!

Water Crisis

ಬೆಂಗಳೂರು: ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು (Water Crisis) ಉಲ್ಬಣಿಸಿರುವ ಹಿನ್ನೆಲೆಯಲ್ಲಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಏ.7ರೊಳಗೆ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸಲು ಬೆಂಗಳೂರು ಜಲಮಂಡಳಿ ಸೂಚಿಸಿತ್ತು. ಇದೀಗ ಮತ್ತೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ಏಪ್ರಿಲ್ 30ರೊಳಗೆ ಮಾಲ್‌, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಸರ್ಕಾರಿ ಕಟ್ಟಡ, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಧಾರ್ಮಿಕ ಸ್ಥಳ ಸೇರಿ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್‌ ಅಳವಡಿಸಲು ಸೂಚಿಸಲಾಗಿದೆ.

ಏಪ್ರಿಲ್ 30ರ ಒಳಗಾಗಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸ ಗ್ರಾಹಕರಿಗೆ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5000 ರೂ. ದಂಡ ವಿಧಿಸಲಾಗುತ್ತದೆ. ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡದ ಮೊತ್ತ 5000 ಜತೆಗೆ ಹೆಚ್ಚುವರಿಯಾಗಿ ದಿನಕ್ಕೆ 500 ರೂ. ದಂಡ ವಿಧಿಸಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.

ಜಲಮಂಡಳಿ ಆದೇಶದಲ್ಲಿ ಏನಿದೆ?

ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಉಲ್ಬಣವಾಗಿರುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವವಾಗಿದೆ. ಈ ಹಿನ್ನಲೆಯಲ್ಲಿ ಮಾಲ್‌, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಸರ್ಕಾರಿ ಕಟ್ಟಡ, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಏರಿಯೇಟರ್‌/ಫ್ಲೋ ರಿಸ್ಟ್ರಿಕ್ಟರ್ ಮಾರ್ಚ್ 31‌ರೊಳಗೆ ಅಳವಡಿಸಿಕೊಳ್ಳಬೇಕು ಎಂದು ಈ ಹಿಂದೆ ಆದೇಶಿಸಲಾಗಿತ್ತು. ಆದರೆ ಈ ಗಡುವನ್ನು ಸಾರ್ವಜನಿಕರ ಕೋರಿಕೆಯ ಮೇರೆಗೆ ಏಪ್ರಿಲ್ 7ರವರೆಗೆ ವಿಸ್ತರಿಸಲಾಗಿತ್ತು. ಮತ್ತೊಮ್ಮೆ ಸಾರ್ವಜನಿಕರು ಈ ಗಡುವನ್ನು ವಿಸ್ತರಿಸುವಂತೆ ಕೋರಿದ್ದರಿಂದ ಕೊನೆ ದಿನಾಂಕವನ್ನು ಏ.30ರವರೆಗೆ ದಂಡ ರಹಿತವಾಗಿ ಷರತ್ತುಗಳನ್ವಯ ವಿಸ್ತರಿಸಲಾಗಿದೆ.

ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಸರ್ಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ (ಅಪಾರ್ಟ್‌ಮೆಂಟ್ ಹೊರತುಪಡಿಸಿ) ಎಲ್ಲಿ ಫ್ಲೋ ರಿಸ್ಟ್ರಿಕ್ಟರ್/‌ ಏರಿಯೇಟರ್ ಸಾಧನವನ್ನು ಅಳವಡಿಸಿರುವುದಿಲ್ಲವೋ ಅಂತಹ ಸ್ಥಳಗಳಲ್ಲಿ ಏ.30ರೊಳಗಾಗಿ ಅಳವಡಿಸುವುದು ಹಾಗೂ ಹೆಚ್ಚು ಪ್ರಮಾಣದಲ್ಲಿ ನೀರು ಬಳಕೆ ಮಾಡುವ ಸ್ಥಳಗಳಲ್ಲಿ ಮಂಡಳಿಯ ವತಿಯಿಂದಲೇ ಆದ್ಯತೆಯ ಮೇರೆಗೆ ಏರಿಯೇಟರ್‌/ಫ್ಲೋ ರಿಸ್ಟ್ರಿಕ್ಟರ್ ಸಾಧನವನ್ನು ಅಳವಡಿಸಿ ಅದರ ವೆಚ್ಚವನ್ನು ಆಯಾ ಗ್ರಾಹಕರ ಮಾಹೆಯ ಬಿಲ್ಲಿನಲ್ಲಿ ಸೇರಿಸಲಾಗುವುದು. ಅಪಾರ್ಟ್‌ಮೆಂಟ್‌ನವರು ಕಡ್ಡಾಯವಾಗಿ ಏ.30ರೊಳಗಾಗಿ ತಾವೇ ವ್ಯವಸ್ಥೆ ಮಾಡಿಕೊಂಡು ಏರಿಯೇಟರ್‌/ಫ್ಲೋ ರಿಸ್ಟ್ರಿಕ್ಟರ್ ಸಾಧನವನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ | Water Crisis: ಇನ್ನೆರಡು ತಿಂಗಳು ಕಾವೇರಿ ನೀರು ಹೊಸ ಕನೆಕ್ಷನ್‌ ಇಲ್ಲ; 11 ಸಾವಿರ ಮಂದಿ ಕಂಗಾಲು

ಮೇಲ್ಕಂಡ ಎಲ್ಲಾ ಸ್ಥಳಗಳಲ್ಲಿ ಏ. 30ರೊಳಗಾಗಿ ಏರಿಯೇಟರ್‌/ಫ್ಲೋ ರಿಸ್ಟ್ರಿಕ್ಟರ್ ಎಂಬ
ಸಾಧನವನ್ನು ಅಳವಡಿಸದಿದ್ದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 53 ರಂತೆ ಮಂಡಳಿಯು ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 50 ರವರೆಗೆ ಕಡಿತ ಮಾಡಿ ಹಾಗೂ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5000 ರೂ. ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ 5000 ರೂ. ಜೊತೆಗೆ ಹೆಚ್ಚುವರಿಯಾಗಿ 500 ರೂ. ಪ್ರತಿದಿನದಂತೆ ದಂಡ ಹಾಕಲಾಗುವುದು. ಈಗಾಗಲೇ ಈ ಹಿಂದೆ ತಿಳಿಸಿದಂತೆ ಈ ಕ್ರಮವನ್ನು ಸರಿಯಾಗಿ ನಿರ್ವಹಿಸುವ ಮೇಲ್ಕಂಡ ಗ್ರಾಹಕರುಗಳಿಗೆ ಬೆಂಗಳೂರು ಜಲಮಂಡಳಿ ವತಿಯಿಂದ ‘ಪರಿಸರ ಸ್ನೇಹಿ ಹಸಿರು ಸ್ಟಾರ್ ಬಳಕೆದಾರ” ಎಂಬ ಪ್ರಮಾಣ ಪತ್ರ ನೀಡಲಾಗುವುದು ಎಂದು ಜಲಮಂಡಳಿ ತಿಳಿಸಿದೆ.

Exit mobile version