ಗದಗ: ಬೇಸಿಗೆ ಆರಂಭದಲ್ಲೇ ಗದಗನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ (Water Crisis) ಶುರುವಾಗಿದೆ. ನಗರದ ೨೮ನೇ ವಾರ್ಡ್‌ನ ಪಂಚಾಕ್ಷರಿ ನಗರದಲ್ಲಿ ನೀರಿಗಾಗಿ ಮಹಿಳೆಯರು ಪ್ರತಿಭಟನೆ ಮಾಡಿದರು. ಖಾಲಿ ಕೊಡಗಳನ್ನು ಹಿಡಿದು ನಗರಸಭೆ ಅಧಿಕಾರಿಗಳು, ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ೨೦ ದಿನಗಳಿಂದ ಕುಡಿಯುವ ನೀರು ಸರಬರಾಜು ಆಗಿಲ್ಲ. ಚರಂಡಿ ಹಾಗೂ ಒಳಚರಂಡಿ ತುಂಬಿ ರಸ್ತೆ ಮಧ್ಯೆ ನೀರು ಹರಿಯುತ್ತಿವೆ. ಚರಂಡಿ ನಿರ್ಮಾಣಕ್ಕೆಂದು ರಸ್ತೆ ಅಗೆದು ಒಂದು ತಿಂಗಳಾದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ತಡರಾತ್ರಿ ನೀರು ಬಿಡುತ್ತಾರೆ. ಈ ಎಲ್ಲದರಿಂದ ಬೇಸತ್ತು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿರುವುದಾಗಿ ಹೇಳಿದರು. ನೀರು ಕೊಡಿ, ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ ಎಂದು ಕಿಡಿಕಾರಿದರು.
ಸ್ಥಳಕ್ಕೆ ಬಂದ ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿಗೆ ಮಹಿಳೆಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ವಾರ್ಡ್ ಕಡೆ ತಿರುಗಿ ನೋಡುತ್ತಿಲ್ಲ . ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ೨೦ ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಅದು ರಾತ್ರಿ ವೇಳೆ ನೀರು ಬಿಡುತ್ತಾರೆ. ಅನೇಕ ಬಾರಿ ಕಲುಷಿತ ನೀರು ಬಿಟ್ಟರೂ ತುಂಬಬೇಕು. ಆ ರಾತ್ರಿ ಸಂದರ್ಭದಲ್ಲಿ ಯಾರು ನೀರು ತುಂಬುತ್ತಾರೆ. ವಾಟರ್ ಟ್ಯಾಂಕರ್ ಕೂಡ ಇತ್ತ ಬರುವುದಿಲ್ಲ. ಯಾರನ್ನು ಕೇಳಬೇಕು ಅಂತ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಗರಸಭೆ ಎದುರು ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Assembly Session: ಸತ್ಯ ಹೇಳೋದು ಗಾಂಧಿವಾದ-ಸುಳ್ಳು ಹೇಳೋದು ಮನುವಾದ: ತಾನು ದೇವರ ವಿರೋಧಿ ಅಲ್ಲ ಎಂದ ಸಿದ್ದರಾಮಯ್ಯ