ಬೆಂಗಳೂರು: ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ರಾಜ್ಯದ 11 ಪ್ರಮುಖ ಜಲಾಶಯಗಳಲ್ಲೂ (Karnataka Reservoirs) ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಾಹಿತಿಯ ಪ್ರಕಾರ, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ 11 ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಶೇ. 40ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಬೆಂಗಳೂರು ಸೇರಿ ಹಳೇ ಮೈಸೂರು ಭಾಗದ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುವ ಹಾರಂಗಿ, ಹೇಮಾವತಿ, ಕಬಿನಿ ಮತ್ತು ಕೃಷ್ಣರಾಜ ಸಾಗರ (KRS) ನಂತಹ ಪ್ರಮುಖ ಜಲಾಶಯಗಳಲ್ಲಿ 51 ಟಿಎಂಸಿ ಮಾತ್ರ ನೀರು ಇದೆ. ಇವುಗಳ ಒಟ್ಟು ನೀರು ಸಂಗ್ರಹಣೆ ಸಾಮರ್ಥ್ಯ 115 ಟಿಎಂಸಿ ಆಗಿದೆ.
ಇನ್ನು ಕೃಷ್ಣಾ ಜಲಾನಯನ ಪ್ರದೇಶದ ಭದ್ರಾ, ವಾಣಿ ವಿಲಾಸ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಸೇರಿ 7 ಜಲಾಶಯಗಳಲ್ಲೂ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದೆ. ಇವುಗಳ ಒಟ್ಟು ಸಾಮರ್ಥ್ಯ 422 ಟಿಎಂಸಿ ಇದ್ದು, ಇದೀಗ ಕೇವಲ 173 ಟಿಎಂಸಿ ನೀರಿದೆ. ಕಳೆದ ವರ್ಷ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ ಕ್ರಮವಾಗಿ 81 ಟಿಎಂಸಿ ನೀರಿತ್ತು. ಇನ್ನು ಭದ್ರಾ, ವಾಣಿ ವಿಲಾಸ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ 331 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಇದನ್ನೂ ಓದಿ | Agriculture Startup: ಕೃಷಿ ನವೋದ್ಯಮ ಆರಂಭಿಸುವಿರೇ? 50 ಲಕ್ಷ ರೂ. ಸಾಲಕ್ಕೆ ಶೇ.50 ರಿಯಾಯಿತಿ ಪಡೆಯಿರಿ!
ಕೆಎಸ್ಎನ್ಡಿಎಂಸಿ ಅಧಿಕಾರಿಗಳ ಪ್ರಕಾರ, ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ನೀರಿನ ಮಟ್ಟದಲ್ಲಿ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ. ಆವಿಯಾಗುವುದರಿಂದ ಜಲಾಶಯಗಳಲ್ಲಿ ನೀರು ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಸರಾಸರಿ ಒಂದು ಟಿಎಂಸಿ ನೀರು ಕಾವೇರಿ ಮತ್ತು ಕೃಷ್ಣ ಜಲಾನಯನ ಪ್ರದೇಶಗಳಿಂದ ಆವಿಯಾಗುತ್ತದೆ. ಕಳವಳಕಾರಿ ಸಂಗತಿಯೆಂದರೆ ಕೆಆರ್‌ಎಸ್ ಜಲಾಶಯವು ಬೆಂಗಳೂರಿನ ಕುಡಿಯುವ ನೀರಿನ ಮೂಲವಾಗಿದ್ದು, ಪ್ರಸ್ತುತ 19.5 ಟಿಎಂಸಿ ಅಡಿ ನೀರು ಮಾತ್ರ ಇದೆ. ಇದು ಮುಂಬರುವ ಕುಡಿಯುವ ನೀರಿನ ಬಿಕ್ಕಟ್ಟಿನ ಬಗ್ಗೆ ಆತಂಕವನ್ನು ಉಂಟುಮಾಡುತ್ತದೆ. ಆದರೆ ಈಗಿರುವ ಸಂಗ್ರಹವು ನಗರದ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ಸುರೇಶ್ ಬಿ. ಮಾತನಾಡಿ, ಜೂನ್ ಅಂತ್ಯದವರೆಗೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ನಮಗೆ ಸುಮಾರು 12 ಟಿಎಂಸಿ ಅಡಿ ನೀರು ಬೇಕು, ಆದ್ದರಿಂದ ಈಗಿರುವ ಸಂಗ್ರಹದಿಂದ ನಾವು ಬೇಸಿಗೆಯನ್ನು ಸುಲಭವಾಗಿ ಎದುರಿಸಬಲ್ಲೆವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Karnataka Weather : ಕೈ ಕಟ್ಟಿ ಕೂರುವಂತೆ ಮಾಡ್ತಿದೆ ತಂಪು ಗಾಳಿ; ಈ ವಾರ ಹೇಗಿರಲಿದೆ ವಾತಾವರಣ
ಕೆಎಸ್‌ಎನ್‌ಎಂಡಿಸಿಯ ಸಲಹೆಗಾರ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಮುಂದಿನ ಮಾನ್ಸೂನ್ ಆಗಮನದವರೆಗೆ ಎಲ್ಲಾ ಪ್ರಾದೇಶಿಕ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿರುವ ಜಲಾಶಯಗಳಲ್ಲಿ ನೀರಿನ ಸಂಗ್ರಹವನ್ನು ಮೇಲ್ವಿಚಾರಣೆ ಮಾಡಲು ಮತ್ತು ಕುಡಿಯುವ ಉದ್ದೇಶಕ್ಕೆ ಪ್ರತ್ಯೇಕವಾಗಿ ನೀರನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.