ಬೆಂಗಳೂರು: ಬೇಸಿಗೆ ಕಾಲ ಈಗಷ್ಟೇ ಶುರುವಾಗಿದೆ. ಜನಸಾಮಾನ್ಯರಿಗೆ ರಣ ಬಿಸಿಲ ಬೇಗೆ ಈಗಾಗಲೇ ತಟ್ಟಿದೆ. ಇದರ ಬೆನ್ನಲ್ಲೇ ರಾಜ್ಯದ 17 ಜಿಲ್ಲೆಗಳಿಗೆ ತೀವ್ರ ಜಲ ಕ್ಷಾಮ (Water scarcity in karnataka) ಉಂಟಾಗಲಿದೆ ಎಂದು ಪರಿಸರ ನಿರ್ವಹಣಾ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಅಧ್ಯಯನ ಎಚ್ಚರಿಕೆ ನೀಡಿದೆ. ಮುಂಜಾಗ್ರತೆ ವಹಿಸದೆ ಇದ್ದರೆ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಲಿದೆ.
ಕರ್ನಾಟಕದ 17 ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಬೆಂಗಳೂರಿನಿಂದ ಹಿಡಿದು ಉತ್ತರದ ನೀರಾವರಿ ಜಿಲ್ಲೆಗಳು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಎಚ್ಚರಿಸಿದೆ.
ಸಂಶೋಧನಾ ಸಂಸ್ಥೆಯಾಗಿರುವ ಇಎಂಪಿಆರ್‌ಐ, ಸರ್ಕಾರಿ ಮೂಲಗಳಿಂದ ಜಿಲ್ಲಾ ಮಟ್ಟದ ಅಂಕಿಅಂಶಗಳನ್ನು ಪರಿಶೀಲನೆ ನಡೆಸಿದೆ. ನೀರಿನ ಕೊರತೆ ಕಂಡು ಹಿಡಿಯಲು 20 ಸೂಚಕಗಳನ್ನು ಬಳಸಿದ್ದಾರೆ. ಈ ಸೂಚಕಗಳು ಮೇಲ್ಮೈ ಮತ್ತು ಅಂತರ್ಜಲ ಲಭ್ಯತೆ, ಅರಣ್ಯ ಪ್ರದೇಶ, ಜನಸಾಂದ್ರತೆ, ದೇಶೀಯ, ಕೃಷಿ, ಜಾನುವಾರು ಮತ್ತು ಕೈಗಾರಿಕೆಗಳಿಗೆ ನೀರಿನ ಬೇಡಿಕೆಯನ್ನು ಪರಿಗಣಿಸಿದೆ. ಜತೆಗೆ ಸರಾಸರಿ ವಾರ್ಷಿಕ ಮಳೆ ಮತ್ತು ಹಲವಾರು ದಶಕಗಳ ತಾಪಮಾನದ ದತ್ತಾಂಶಗಳನ್ನು ಒಳಗೊಂಡಿವೆ.
ಎಲ್ಲೆಲ್ಲಿ ಜಲ ಕ್ಷಾಮ?
ಬೆಂಗಳೂರು ಗ್ರಾಮಾಂತರ | ರಾಯಚೂರು |
ಗದಗ | ಕೊಪ್ಪಳ |
ಚಿಕ್ಕಬಳ್ಳಾಪುರ | ಕಲಬುರಗಿ |
ಬಳ್ಳಾರಿ | ವಿಜಯಪುರ |
ಬೀದರ್ | ಬೆಳಗಾವಿ |
ಬೆಂಗಳೂರು | ಕೋಲಾರ |
ಬಾಗಲಕೋಟೆ | ದಾವಣಗೆರೆ |
ಯಾದಗಿರಿ | ಚಿತ್ರದುರ್ಗ |
ತುಮಕೂರು |
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಉತ್ತರ ಕರ್ನಾಟಕದ ಶುಷ್ಕ ಜಿಲ್ಲೆಗಳಿಗಿಂತ ಹೆಚ್ಚು ದುರ್ಬಲ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದರ ನಂತರ ರಾಯಚೂರು, ಚಿಕ್ಕಬಳ್ಳಾಪುರ, ಕಲಬುರಗಿ, ಗದಗ, ಕೊಪ್ಪಳ, ಬಳ್ಳಾರಿ, ಬಿಜಾಪುರ, ಬೀದರ್ ಮತ್ತು ಬೆಳಗಾವಿ. ಬೆಂಗಳೂರು ನಗರ 12ನೇ ಸ್ಥಾನದಲ್ಲಿದ್ದು, ಕೇವಲ ಒಂದು ಸ್ಥಾನ ಕೆಳಗೆ ಕೋಲಾರ, ಬಾಗಲಕೋಟೆ, ದಾವಣಗೆರೆ, ಯಾದಗಿರಿ, ಚಿತ್ರದುರ್ಗ ಮತ್ತು ತುಮಕೂರು ಕೂಡ ಪಟ್ಟಿಯಲ್ಲಿವೆ.
ನೀರಿನ ಅಭಾವ ಎದುರಿಸುವ 17 ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಸಹ ಸ್ಥಾನ ಪಡೆದಿದೆ. ಹೀಗಾಗಿ ನಗರದಲ್ಲಿ ಸಹ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಜಲ ಮಂಡಳಿ ಎಚ್ಚರ ವಹಿಸಬೇಕಿದೆ. ಇನ್ನು ಈ ಬಗ್ಗೆ BWSSBಯ ಪ್ರಧಾನ ಮುಖ್ಯ ಅಭಿಯಂತರ ಸುರೇಶ್ ಸಹ ಪ್ರತಿಕ್ರಿಯೆ ನೀಡಿದ್ದು, ಜಲಮಂಡಳಿ ವ್ಯಾಪ್ತಿಯಲ್ಲಿ ಬರುವ ಜಲ ಮೂಲಗಳ ಬಗ್ಗೆ ಎಲ್ಲಾ ಮಾಹಿತಿ ಇದೆ. ಬೋರ್ ವೆಲ್‌ಗಳ ಮುಖಾಂತರ ನೀರಿನ ಬವಣೆ ನೀಗಿಸುತ್ತೇವೆ. ಬೋರ್ ವೆಲ್‌ಗಳು ಒಂದು ವೇಳೆ ಬತ್ತುಹೋದಲ್ಲಿ, ಖಾಸಗಿ ವ್ಯಕ್ತಿಗಳಿಂದ ನೀರು ಖರೀದಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Rain: ರಾಜ್ಯಾದ್ಯಂತ ಇನ್ನೆರಡು ದಿನ ವರುಣಾರ್ಭಟ; ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ
ಕರ್ನಾಟಕದ ವಿವಿಧ ಜಿಲ್ಲೆಗಳಾದ್ಯಂತ ಜಲಸಂಪನ್ಮೂಲ ವಲಯದ ಮೌಲ್ಯಮಾಪನ ಎಂಬ ಶೀರ್ಷಿಕೆಯ ವರದಿಯು ಎಚ್ಚರಿಕೆಯ ಗಂಟೆಯಾಗಿದೆ. ಹೀಗಾಗಿ ಸದ್ಯ ಇರುವ ಜಲ ಮೂಲಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ನೀರಿನ ಸಮಸ್ಯೆಗಳು ತೀವ್ರ ತರದಲ್ಲಿ ಕಾಡುವುದು ನಿಶ್ಚಿತವಾಗಿರಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ