ತುಮಕೂರು: ದೇಶಾದ್ಯಂತ ಕಾಂಗ್ರೆಸ್ ಕೈಗೊಂಡಿರುವ ಭಾರತ್ ಜೋಡೊ ಯಾತ್ರೆಗೆ (Bharat Jodo Yatra) ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನಿಸಿಲ್ಲ ಎಂಬ ವಿಚಾರದ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದು, “ಪಕ್ಷದಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ. ಎಲ್ಲರೂ ಒಗ್ಗೂಡಿ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ” ಎಂದಿದ್ದಾರೆ.
ತುಮಕೂರಿನ ಗುಬ್ಬಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತ್ ಜೋಡೊ ನನ್ನ ಕಾರ್ಯಕ್ರಮ ಅಲ್ಲ. ಅದು ಕಾಂಗ್ರೆಸ್ ಕಾರ್ಯಕ್ರಮವಾಗಿದೆ. ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ. ಆದರೆ, ನಾನು ಮತ್ತು ಸಿದ್ದರಾಮಯ್ಯ ಅವರು ಸೆ.೧೮, ೧೯ರಂದು ಮಂಡ್ಯ, ಮೈಸೂರು ಪ್ರವಾಸಕ್ಕೆ ಹೊರಟಿದ್ದೇವೆ. ಡಾ.ಜಿ.ಪರಮೇಶ್ವರ್ ಅವರು ಕೇರಳಕ್ಕೆ ಹೋಗಿದ್ದಾರೆ. ಹೀಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಎಲ್ಲರೂ ನಿಭಾಯಿಸುತ್ತಿದ್ದೇವೆ” ಎಂದು ತಿಳಿಸಿದರು.
“ಪಕ್ಷವು ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಿದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಸೋನಿಯಾ ಗಾಂಧಿ ಅವರು ಜವಾಬ್ದಾರಿ ನೀಡಿದ್ದಾರೆ. ನನಗೆ ಪಕ್ಷದ ಸಂಘಟನೆಯ ಕೆಲಸ ನೀಡಲಾಗಿದೆ. ಹಾಗಾಗಿ, ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ” ಎಂದು ಸ್ಪಷ್ಟನೆ ನೀಡಿದರು.
೨೨ ದಿನ ಯಾತ್ರೆ
“ದೇಶದ ಏಕತೆ, ಉದ್ಯೋಗ ಸೃಷ್ಟಿ ಹಾಗೂ ಭ್ರಷ್ಟಾಚಾರದ ವಿರುದ್ಧ ಭಾರತ್ ಜೋಡೊ ಯಾತ್ರೆ ನಡೆಯುತ್ತಿದೆ. ಸಂಘಟನೆಯ ವಿಚಾರಕ್ಕಾಗಿ ನಾನು ಜಿಲ್ಲೆಗೆ ಆಗಮಿಸಿದ್ದೇನೆ. ನಮ್ಮ ಯಾತ್ರೆಯು ೨೨ ದಿನ, ೫೧೦ ಕಿ.ಮೀ ನಡೆಯಲಿದೆ. ಇದು ದೇಶದಲ್ಲಿಯೇ ಹೆಚ್ಚು ದಿನ ನಡೆಯುವ ಯಾತ್ರೆಯಾಗಿದೆ. ತುಮಕೂರು ಜಿಲ್ಲೆಯಲ್ಲಿಯೇ ನಾಲ್ಕು ದಿನ ಯಾತ್ರೆ ಸಾಗಲಿದೆ. ಪ್ರತಿ ದಿನ ೨೦ ಸಾವಿರ ಜನ ನಡೆಯಬೇಕು. ಯಾರೂ ರಾಹುಲ್ ಗಾಂಧಿ ಅವರಿಗೆ ಹೂವಿನ ಹಾರ ಹಾಕಬಾರದು” ಎಂದು ಡಿಕೆಶಿ ಮನವಿ ಮಾಡಿದರು.
“ರಾಹುಲ್ ಗಾಂಧಿ ಅವರು ಪ್ರತಿ ದಿನ ೨೫ ಕಿ.ಮೀ ನಡೆಯುತ್ತಾರೆ. ಪ್ರಮುಖ ದೇವಸ್ಥಾನ ಹಾಗೂ ಮಠಗಳಿಗೆ ಹೋಗುತ್ತಾರೆ. ಅಲ್ಲಲ್ಲಿ ಸಂವಾದ ಕಾರ್ಯಕ್ರಮಗಳೂ ನಡೆಯಲಿವೆ. ಆದಿಚುಂಚನಗಿರಿಯಿಂದ ಆರಂಭವಾಗಿ ತುರುವೇಕೆರೆ, ಕಲ್ಲೂರು ಕ್ರಾಸ್, ನಿಟ್ಟೂರು, ಗುಬ್ಬಿ, ಚೇಳೂರು, ಶಿರಾ, ತಾವರೆಕೆರೆ ಮಾರ್ಗವಾಗಿ ಹಿರಿಯೂರಿಗೆ ಯಾತ್ರೆ ಸಾಗುತ್ತದೆ. ಅಕ್ಟೋಬರ್ 9ರಿಂದ 13ರವರೆಗೆ ಜಿಲ್ಲೆಯಲ್ಲಿ ಯಾತ್ರೆ ಸಾಗಲಿದೆ” ಎಂದು ಮಾಹಿತಿ ನೀಡಿದರು.
ಯಾವ ತನಿಖೆಗೂ ಸಿದ್ಧ ಎಂದ ಡಿಕೆಶಿ
ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ಈ ವಿಚಾರ ಮುಚ್ಚಿಟ್ಟುಕೊಂಡು ಕೂರಲು ಆಗುವುದಿಲ್ಲ. ನನಗೆ ಅಧಿವೇಶನ ಇದೆ, ಭಾರತ್ ಜೋಡೊ ಕಾರ್ಯಕ್ರಮ ಇದೆ. ಇದರ ಮಧ್ಯೆಯೇ ಇ.ಡಿ ನೋಟಿಸ್ ನೀಡಿದೆ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಸಿಬಿಐನವರು ೨೦೨೦ರಲ್ಲಿ ಕೇಸ್ ಹಾಕಿದ್ದಾರೆ. ನಾನು ಎಲ್ಲ ತನಿಖೆಗೂ ಸಿದ್ಧನಿದ್ದೇನೆ ಹಾಗೂ ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ | ನನಗೆ, ಸಿದ್ದರಾಮಯ್ಯಗೆ ಜಯಕಾರ ಬೇಡ; ದೇಶಕ್ಕೆ ಜೈ ಎನ್ನಿ: ಭಾರತ್ ಜೋಡೊ ಪೂರ್ವಭಾವಿ ಸಭೆಯಲ್ಲಿ ಡಿಕೆಶಿ