ಯಲ್ಲಾಪುರ: ಈ ಭಾಗದಲ್ಲಿ ಕಲಿತ ಜನ ಸಂಸ್ಕಾರವನ್ನು ಮರೆತಿಲ್ಲ. ಮಕ್ಕಳು ಜಗತ್ತಿನ ಮೂಲೆ ಮೂಲೆ ಸುತ್ತಲಿ, ಆದರೆ ತಮ್ಮ ತಮ್ಮ ಸೇವೆಯನ್ನು ನಮ್ಮ ಭಾರತಕ್ಕೆ ಸಲ್ಲಿಸುವಂತಾಗಲಿ. ತಾಯ್ನಾಡಿಗೆ ಸೇವೆ ಸಲ್ಲಿಸುವ ಭಾಗ್ಯಕ್ಕೆ ಅಪಾರ ಬೆಲೆಯಿದೆ. ನಮ್ಮ ಪ್ರಗತಿಯೊಂದಿಗೆ ದೇಶದ ಪ್ರಗತಿಗಾಗಿ ಕೊನೆಯುಸಿರು ಇರುವವರೆಗೂ ದುಡಿಯಬೇಕು ಎಂದು ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.
ಸೋಮವಾರ ಪಟ್ಟಣದ (Yellapur News) ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸೇವಾ ನಿವೃತ್ತಿ ಎನ್ನುವುದು ಒಂದು ದೊಡ್ಡ ತೊಡಕಾಗಿದೆ. ತಮ್ಮ ಸೇವಾ ಕಾರ್ಯಾವಧಿಯಲ್ಲಿ ಪಡೆದ ಅನುಭವವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತಿಲ್ಲ. ಮಕ್ಕಳ ಸಂಸ್ಕಾರ ಅಭಿವೃದ್ಧಿಗೆ ಈ ಸಂಸ್ಥೆ ಪ್ರಯತ್ನಿಸುತ್ತಿರುವುದು ಸಂತಸದ ಸಂಗತಿ. ಕೇವಲ ಮಾರ್ಕ್ಸ್ ಕಾರ್ಡ್ ಮೂಲಕ ಮಕ್ಕಳ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ. ಜೀವನದಲ್ಲಿ ಪಡೆದ ಅನುಭವಗಳು ಅವರ ಜೀವನದ ಬೆಳವಣಿಗೆಗೆ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ದೇವರಲ್ಲಿ ಶೃದ್ಧೆ, ಎಲ್ಲಾ ಕೆಲಸವನ್ನು ಮಾಡುವ ಹಂಬಲ ನನಗೆ ಜೀವನದಲ್ಲಿ ಯಶಸ್ಸು ನೀಡಿದೆ. ಮಕ್ಕಳಿಗೆ ಆಡುವ ಅವಕಾಶವನ್ನು, ಪ್ರತಿನಿತ್ಯದ ಕೆಲಸವನ್ನು ಮಾಡುವಂತೆ ಪ್ರೇರಣೆಯನ್ನು ಪಾಲಕರು ನೀಡಬೇಕು. ನಾವು ಯಾರನ್ನೂ ಮಾದರಿಯನ್ನಾಗಿರಿಸಿಕೊಳ್ಳದೆ, ನಮಗೆ ನಾವೇ ಮಾದರಿಯಾದಾಗ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ | Savarkar Jayanti: ಭಾರತೀಯರನ್ನು ಸ್ವಸ್ವರೂಪದ ಅರಿವಿನೆಡೆಗೆ ನಡೆಸಿದ ವೀರ ಸಾವರ್ಕರ್
ಮುಖ್ಯ ಅತಿಥಿ ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿ ಕೆ. ಬಿ. ಗುಡಸಿ ಅವರು ಮಾತನಾಡಿ, ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಇಡೀ ವಿಶ್ವಕ್ಕೆ ಗುರುವಾಗಿದ್ದ ನಾವು, ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಕಾರಣ ಹಿಂದುಳಿಯುವಂತಾಗಿದೆ. 70 ವರ್ಷಗಳ ನಂತರ ಮತ್ತೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಮೂಲಕ ಉತ್ತಮ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಮುನ್ನಡೆಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು, ಉದ್ಯಮವನ್ನು ಬದುಕಿನ ಸಾರ್ಥಕತೆಗೋಸ್ಕರ ನಡೆಸುತ್ತಿರುವ ವಿಜಯ ಸಂಕೇಶ್ವರ ಅವರು ಯುವ ಪೀಳಿಗೆಗೆ ಆದರ್ಶಪ್ರಾಯರು. ಪ್ರವಾಹದ ವಿರುದ್ಧ ಈಜುವ ಅವರ ಗುಣ ಮಕ್ಕಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಆರಂಭ
ವಿಜಯ ಸಂಕೇಶ್ವರ ಅವರು ವಿವಿಧ ಕ್ಷೇತ್ರಗಳಲ್ಲಿ ಜನರ ಕೊಂಕು ಮಾತುಗಳನ್ನು ಎದುರಿಸಿ ಸಾಧನೆ ಮಾಡಿದ್ದಾರೆ. ಪರಿಶ್ರಮ, ಶಿಸ್ತು, ಪ್ರಾಮಾಣಿಕತೆಯು ಅವರ ಯಶಸ್ಸಿನ ಮೂಲಮಂತ್ರವಾಗಿದೆ. ಇದನ್ನು ಮಕ್ಕಳು ಪಾಲಿಸಿ, ಭವಿಷ್ಯದಲ್ಲಿ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂಬ ಬಯಕೆಯಿಂದ ಅವರನ್ನು ಇಂದಿನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಅನ್ನು ಆರಂಭಿಸಲಿದ್ದೇವೆ ಎಂದು ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ, ಸುಸಂಸ್ಕೃತರ ಊರಲ್ಲಿ ಕಾರ್ಯನಿರ್ವಹಿಸುವ ಅವಕಾಶ ನನಗೆ ದೊರೆತಿದ್ದು ನನ್ನ ಭಾಗ್ಯವಾಗಿದೆ. ಲಾಭ ನಷ್ಟದ ಉದ್ಯಮ ನಡೆಸಲು ಇಚ್ಛಿಸುವವರು ಇಂತಹ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಡೆಸಲು ಸಾಧ್ಯವಿಲ್ಲ. ಇಂದಿನ ಶೈಕ್ಷಣಿಕ ವರ್ಷ ಒಬ್ಬ ಯಶಸ್ವಿ ವ್ಯಕ್ತಿಯಿಂದ ಆರಂಭವಾಗುತ್ತಿದೆ ಎಂಬುದು ಸಂತಸದ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ ಪರಿಚಯ ಪತ್ರ ಬಿಡುಗಡೆಗೊಳಿಸಲಾಯಿತು. ನಂತರ ವಿದ್ಯಾರ್ಥಿಗಳೊಂದಿಗೆ ಡಾ. ವಿಜಯ ಸಂಕೇಶ್ವರ ಅವರು ಸಂವಾದ ನಡೆಸಿದರು. ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ | Gururaj Gantihole: ಬರಿಗಾಲ ಸಂತ ವಿಧಾನಸೌಧದ ಮೆಟ್ಟಿಲೇರುವುದು ಸಾಮಾನ್ಯ ಸಂಗತಿಯಲ್ಲ: ಪ್ರಮೋದ್ ಹೆಗಡೆ
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸುಭದ್ರ ಇಂಡಸ್ಟ್ರೀಸ್ ಎಂ.ಡಿ. ಶ್ರೀನಿವಾಸ ಹೆಬ್ಬಾರ್, ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಇದ್ದರು. ಹರ್ಷಿತಾ ಜಿ. ಪ್ರಾರ್ಥಿಸಿದಳು. ಪ್ರಾಚಾರ್ಯರಾದ ಡಿ.ಕೆ. ಗಾಂವ್ಕರ್, ಶಿಕ್ಷಕಿ ಆಸ್ಮಾ ಶೇಖ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಮಹಾದೇವಿ ಭಟ್ ವಂದಿಸಿದರು.