ಹಾಸನ: ಸಾಕಾನೆ ಅರ್ಜುನನನ್ನು (Elephant Arjuna) ಕೊಂದ ಕಾಡಾನೆಯನ್ನು ಹಿಡಿದೇ ಹಿಡಿಯುತ್ತೇವೆ ಎಂದು ಮಾವುತ ಗುಂಡಣ್ಣ ಶಪಥ ಮಾಡಿದ್ದಾರೆ. ಹಾಸನದ ಯಳಸೂರು ಕಾಡಿನಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಮೃತಪಟ್ಟ ಅರ್ಜುನನ ನೆನೆದು ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಆನೆ ಕ್ಯಾಂಪ್‌ನಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದ ಸದಸ್ಯನಂತಿದ್ದ ಅರ್ಜುನನ ಕಳೆದುಕೊಂಡ ದುಃಖದಲ್ಲಿ ಮಾವುತರು ಇದ್ದಾರೆ.
ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ ಮಾಡಿ, ಸಾಕಾನೆಗಳೊಂದಿಗೆ ಮಾವುತರು ಹಾಗೂ ಕಾವಡಿಗಳು ವಾಪಸ್ ಆಗುತ್ತಿದ್ದಾರೆ. ಅರ್ಜುನನನ್ನು ಕಳೆದುಕೊಂಡ ದುಃಖದಲ್ಲಿರುವ ಮಾವುತರಿಗೆ ಅಧಿಕಾರಿಗಳು ಸಾಂತ್ವಾನ ಹೇಳುತ್ತಿದ್ದರು. ಅರ್ಜುನನನ್ನು ಕೊಂದ ಕಾಡಾನೆಯನ್ನು ಜನರ ಮುಂದೆಯೇ ಸೆರೆಹಿಡಿದು ತರುತ್ತೇವೆ ಎಂದು ಮಾವುತ ಗುಂಡಣ್ಣ ಅಧಿಕಾರಿಗಳೊಂದಿಗೆ ಶಪಥ ಮಾಡಿದರು.
ಅರ್ಜುನನ್ನು ಕಳೆದುಕೊಂಡು ಚಿಂತೆ ಇದೆ. ಬಹಳ ನೋವಾಗಿದೆ, ಆದರೆ ಮನಸ್ಸು ಗಟ್ಟಿಮಾಡಿಕೊಂಡಿದ್ದೇವೆ. ಆ ಕಾಡಾನೆಯನ್ನು ಹಿಡಿಯುವ ಆಸೆಯಿದೆ. ಮತ್ತೆ ಇದೇ ಕ್ಯಾಂಪ್‌ಗೆ ಬರುತ್ತೇವೆ, ಕಾಡಾನೆಯನ್ನು ಹಿಡಿಯುತ್ತೇವೆ, ಜನರು ಅದನ್ನು ನೋಡಬೇಕು ಹಾಗೆ ಮಾಡುತ್ತೇವೆ ಎಂದರು. ಈ ವೇಳೆ ಸಿಸಿಎಫ್ ರವಿಶಂಕರ್ ಹಾಗೂ ಡಿಎಫ್‌ಓ ಮೋಹನ್ ಮತ್ತೊಮ್ಮೆ ಕಾಡಾನೆ ಸೆರೆಗೆ ಕಾರ್ಯಾಚರಣೆ ಸಿದ್ಧ ಮಾಡುತ್ತೇವೆ ಎಂದರು.
ಇದನ್ನೂ ಓದಿ: Elephant Attack : ರಸ್ತೆ ದಾಟುವಾಗ ಅಡ್ಡ ಬಂದ ಸವಾರ; ಬೈಕ್ ಪುಡಿ ಮಾಡಿ ಪ್ರಾಣ ತೆಗೆದ ಕಾಡಾನೆಗಳು!
ಅರ್ಜುನನಿಗೆ ಅರ್ಜುನನೇ ಸರಿಸಾಟಿ- ಕಣ್ಣೀರಿಟ್ಟ ಮಾವುತ
ಅರ್ಜುನ ಹೆಸರಿನ ಆನೆಯನ್ನು ಕಳೆದುಕೊಂಡು ಮಾವುತ ವಿನೋದ್ ದುಃಖಿತನಾಗಿದ್ದಾರೆ. ಅರ್ಜುನನಿಗೆ ಅರ್ಜುನನೇ ಸಾಟಿ ಎಂದು ಕಣ್ಣೀರಿಟ್ಟರು. ನನ್ನ ಕುಟುಂಬವೇ ಅರ್ಜುನನೊಂದಿಗೆ ಅವಿನಾಭಾವ ಸಂಬಂಧ ಹೊಂದಿತ್ತು. ನಾನು ಒಂಟಿಯಾಗಿ ಹೋಗಿ ಮುಖ ತೋರಿಸುವುದು ಹೇಗೆ ಎಂಬಂತಾಗಿದೆ. ಮನೆಗೆ ಬಂದ ಕೂಡಲೇ ನನ್ನ ಮಕ್ಕಳು ಎಲ್ಲರೂ ಅರ್ಜುನನಿಗೆ ಆಹಾರ ನೀಡುತ್ತಿದ್ದರು. ನನ್ನ ತಂದೆಗೆ ಸ್ಟ್ರೋಕ್ ಆಗಿ ಮನೆಯಲ್ಲಿದ್ದಾರೆ. ಅರ್ಜುನನಿಗೂ ನನ್ನ ತಂದೆಗೂ ಅವಿನಾಭಾವ ಸಂಬಂಧ ಇತ್ತು. ನಾನು ಒಂಟಿಯಾಗಿ ಮತ್ತೆ ಕ್ಯಾಂಪ್‌ಗೆ ಹೋಗಲು ಮನಸ್ಸಾಗುತ್ತಿಲ್ಲ. ಅರ್ಜುನ ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದುಃಖ ತೊಡಿಕೊಂಡರು.
ವಾಚರ್ ಮಿಸ್ ಫೈರ್
ಕಾಡಾನೆ ಕಾರ್ಯಾಚರಣೆ ವೇಳೆ ಆದ ಕೆಲ ಯಡವಟ್ಟನ್ನು ವಿನೋದ್ ಬಿಚ್ಚಿಟ್ಟಿದ್ದಾರೆ. ಅರವಳಿಕೆಯನ್ನು ಕಾಡಾನೆ ಬದಲು ಬೇರೆ ಆನೆಗೆ ಬಿದ್ದಿತು. ಅದನ್ನು ಸಂಬಾಳಿಸುವತ್ತ ಎಲ್ಲರೂ ಗಮನ ಕೊಟ್ಟಿದ್ದರು. ನಾನು ಅರ್ಜುನನಿಂದ ಕೆಳಗೆ ಇಳಿದು ಪ್ರಶಾಂತನ ಜತೆ ಇದ್ದೆ.
ಆ ಸಂದರ್ಭ ಕಾಡಾನೆ ಏಕಾಏಕಿ ಅರ್ಜುನನ ಮೇಲೆ ದಾಳಿ ಮಾಡಿತು. ಅರಣ್ಯ ಇಲಾಖೆಯ ವಾಚರ್ ಮಿಸ್ ಫೈರ್ ಮಾಡಿದಾಗ ,ಅದು ಅರ್ಜುನನ ಕಾಲಿಗೆ ಬಿತ್ತು. ಕಾಲು ನೋವಿನಿಂದ ಒಂಟಿ ಸಲಗದೊಂದಿಗೆ ಸೆಣಸಾಡಲು ಅರ್ಜುನನಿಗೆ ಆಗಲಿಲ್ಲ. ಇಲ್ಲದಿದ್ದರೆ ಇಂತಹ ಮೂರು ಆನೆ ಬಂದಿದ್ದರೂ ಅರ್ಜುನ ಹೊಡೆದು ಹಾಕುತ್ತಿದ್ದ ಎಂದು ವಿನೋದ್ ಮಾಹಿತಿ ನೀಡಿದರು.
ಮರಣೋತ್ತರ ಪರೀಕ್ಷೆಗೆ ಒತ್ತಾಯ!
ಮತ್ತೊಂದು ಕಡೆ ಸಾಕಾನೆ ಅರ್ಜುನನ ಮರಣೋತ್ತರ ಪರೀಕ್ಷೆಗೆ ಒತ್ತಾಯ ಕೇಳಿ ಬಂದಿದೆ. ಅಭಿಯಾನದ ಮೂಲಕ ಸಾವಿಗೆ ನ್ಯಾಯ ಒದಗಿಸಲು ಕರೆ ನೀಡಲಾಗಿದೆ. ಅರ್ಜುನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕೆಂದು ಪ್ರತಿಭಟನೆ ಮಾಡಿದರೆ, ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಾರೆ ಎಂದು ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.
ಅರ್ಜುನನ ಮಾವುತರೇ ಗುಂಡೇಟು ಬಿದ್ದಿದೆ ಎಂದು ಹೇಳಿದರೂ, ಹಾಸನ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ, ಮರಣೋತ್ತರ ಪರೀಕ್ಷೆ ನಡೆಸದೇ ಅರ್ಜುನನ ಅಂತ್ಯಸಂಸ್ಕಾರ ಮಾಡಿದ್ದಾರೆ. ಗುಂಡೇಟು ಬಿದ್ದಿರುವ ಕಾಲು ಕಾಣಬಾರದು ಎಂದು ಅದನ್ನು ಮಾರೆ ಮಾಚಿ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ. ನ್ಯಾಯಾಲಯ ಮಧ್ಯಪ್ರವೇಶ ಮಾಡಿ, ಅರ್ಜುನನ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಯನ್ನು ಮಾಡಬೇಕು ಎಂದು ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ಆಗ್ರಹಿಸಿದ್ದಾರೆ.
ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ಅರಣ್ಯಾಧಿಕಾರಿಗಳು 6 ಸಾಕಾನೆಗಳ ಬಳಸಿ ಕಾಡಾನೆ ಸೆರೆಗೆ ಮುಂದಾಗಿದ್ದರು. ಕಾರ್ಯಾಚರಣೆಯ ತಂಡದ ನಾಯಕ ಅರ್ಜುನ ಮೃತಪಟ್ಟ ಹಿನ್ನೆಲೆಯಲ್ಲಿ ಚಿಕ್ಕಮಗಳೂರಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿದೆ. ಅರ್ಜುನ ಸಾವಿನಿಂದ ಮಾವುತರು, ಕಾವಡಿಗರು ದುಃಖದಲ್ಲಿ ಇದ್ದಾರೆ.
ನವೆಂಬರ್ 24 ರಿಂದ ಬಿಕ್ಕೋಡು ಕ್ಯಾಂಪ್‌ನಲ್ಲಿ ಸಾಕಾನೆಗಳು ಹಾಗೂ ಮಾವುತರು ತಂಗಿದ್ದರು. ದುಬಾರೆಯಿಂದ , ಮತ್ತಿಗೋಡು ಕ್ಯಾಂಪ್‌ನಿಂದ ತಲಾ ಮೂರು ಸಾಕಾನೆಗಳು ಕಾರ್ಯಾಚರಣೆಗೆ ಬಂದಿದ್ದವು. ಈಗ ಅರ್ಜುನನ್ನು ಕಳೆದುಕೊಂಡು ಮರಳಿ ಕ್ಯಾಂಪ್‌ಗೆ ಧನಂಜಯ, ಪ್ರಶಾಂತ, ಕರ್ನಾಟಕ ಭೀಮ, ಅಶ್ವತ್ಥಾಮ, ಸುಗ್ರೀವಾ ತೆರಳಲಿದ್ದಾರೆ. ಬೇಲೂರು ತಾಲ್ಲೂಕಿನ ಬಿಕ್ಕೋಡು ಬಳಿಕ ತಾತ್ಕಾಲಿಕ ಆನೆ ಶಿಬಿರದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಲಾರಿ ಮೂಲಕ ತಮ್ಮ ಕ್ಯಾಂಪ್‌ಗಳಿಗೆ ತೆರಳಲಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.