Site icon Vistara News

‌Peripheral Ring Road : ಫೆರಿಫೆರಲ್ ರಿಂಗ್ ರೋಡ್‌ ಮಾಡೇ ಮಾಡ್ತೇವೆ: ಡಿ.ಕೆ. ಶಿವಕುಮಾರ್

DCM DK Shivakumar

ಬೆಂಗಳೂರು: ಫೆರಿಫೆರಲ್ ರಿಂಗ್ ರಸ್ತೆ (‌‌‌Peripheral Ring Road) ನಿರ್ಮಾಣ ಯೋಜನೆಯನ್ನು ರದ್ದು ಮಾಡಲು ಸಾಧ್ಯವೇ ಇಲ್ಲ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವ ಇದನ್ನು ಕೈಬಿಡಲು ಸಾಧ್ಯ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಭೂಮಿ ಕಳೆದುಕೊಂಡ ರೈತರು ಮತ್ತು ನಿವೇಶನದಾರರೊಂದಿಗೆ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಬೆಂಗಳೂರಿನಲ್ಲಿ ಅತಿಯಾದ ಟ್ರಾಫಿಕ್ ಸಮಸ್ಯೆ ಇದೆ. ಹೀಗಾಗಿ ಫೆರಿಫೆರಲ್ ರಿಂಗ್ ರಸ್ತೆಯ ಅವಶ್ಯಕತೆ ಇದೆ ಎಂದು ಅವರು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Lok Sabha Election 2024 : ಲೋಕಸಭೆ ಅಖಾಡಕ್ಕೆ ಕಾಂಗ್ರೆಸ್‌ ರೆಡಿ; ಶಾಸಕ, ಸಚಿವರನ್ನೇ ಕಣಕ್ಕಿಳಿಸಲು ಪ್ಲ್ಯಾನ್!

ಈ ವೇಳೆ ಮಾತನಾಡಿದ ಭೂಮಿ ಕಳೆದುಕೊಂಡ ರೈತರು, ನಿವೇಶನದಾರರು, ಈ ಯೋಜನೆಯನ್ನು ರದ್ದು ಮಾಡಿ, ಎನ್‌ಒಸಿ ನೀಡಬೇಕು. ಆ ಮೂಲಕ ನಮಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು.

ನೌಕರನ ಭಾವುಕ ಮಾತು

ಕಳೆದ 15 ವರ್ಷಗಳಿಂದ ಯೋಜನೆ ಬಾಕಿ ಉಳಿದಿದೆ. ನನಗೆ ನಿವೃತ್ತಿ ಆಗಿದ್ದು, ಈಗ 75 ವರ್ಷ ಆಗಿದೆ. ನಮ್ಮ ಬೇಡಿಕೆ ಈಡೇರಿಕೆ ಆಗಲ್ಲ ಅನ್ನೋದು ಗೊತ್ತಿದೆ. ಸರ್ಕಾರ ಮಾಡೋ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಆದಷ್ಟು ಬೇಗ ಒಂದು ತೀರ್ಮಾನಕ್ಕೆ ಬನ್ನಿ. ನನಗೂ ವಯಸ್ಸಾಯ್ತು. ನನ್ನ ಮಕ್ಕಳು ನನ್ನ ಫೋಟೋ ಹಾಕೋ ಮೊದಲು ಸಮಸ್ಯೆ ಬಗೆಹರಿಸಿ ಎಂದು ಫೆರಿಫೆರಲ್ ರಸ್ತೆ ವಿಚಾರವಾಗಿ ನಿವೃತ್ತ ನೌಕರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಇದಲ್ಲದೆ 2013ರ ಅನ್ವಯ ಭೂ ಪರಿಹಾರ ನೀಡಬೇಕು. ಜತೆಗೆ ಭೂಮಿ ಕಳೆದುಕೊಂಡವರಿಗೆ ಪರ್ಯಾಯ ಭೂಮಿ ನೀಡಬೇಕು ಎಂದು ಇದೇ ವೇಳೆ ಒತ್ತಾಯಗಳು ಕೇಳಿ ಬಂದವು.

ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಿಭಿನ್ನ ಅಭಿಪ್ರಾಯಗಳನ್ನು ಹೇಳಿದ್ದೀರ. ನನಗೆ ಡಿಲಿಮಿಟೇಷನ್ ಮಾಡುವ ಅಧಿಕಾರ ಇಲ್ಲ. ನಿಮಗೆ ಸಹಾಯ ಮಾಡುವ ದಾರಿ‌ಯನ್ನು ಹುಡುಕುತ್ತಿದ್ದೇನೆ. ಲಾಯರ್‌ಗಳಿಗಿಂತ ರೈತರಿಗೆ ಹೆಚ್ಚಿನ ಕಾನೂನು ಗೊತ್ತಿದೆ. ನಾನು ಕಾನೂನು‌ ತಜ್ಞರ ಜತೆ ಚರ್ಚೆ ಮಾಡುತ್ತೇನೆ. ರೋಡ್ ಮಾಡುವುದನ್ನು ನಾವು ನಿಲ್ಲಿಸಲು ಆಗಲ್ಲ. ಆದರೆ, ಪರಿಹಾರ ಕೊಡುವ ಬಗ್ಗೆ ಚರ್ಚಿಸುತ್ತೇನೆ. ಇದರ ಬಗ್ಗೆ ಗಂಭೀರವಾಗಿ ಯೋಚಿಸುತ್ತೇವೆ. ಕ್ಯಾಬಿನೆಟ್‌ನಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಆದಷ್ಟು ಬೇಗ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ನಾನಂತೂ ಯೋಜನೆಯನ್ನು ಲೇಟ್ ಮಾಡಲ್ಲ. ರೋಡ್ ಆಗಬೇಕು, ನಿಮಗೂ ಲಾಭ ಆಗಬೇಕು. ನಿಮಗೆ ಹೇಗೆ ಸಹಾಯ ಮಾಡೋಕೆ ಸಾಧ್ಯ ಎಂಬುದರ ಬಗ್ಗೆ ನಾನು‌ ಯೋಚಿಸುತ್ತಿದ್ದೇನೆ. ಇನ್ನು ಶ್ರೀರಾಮಕಾರಂತ ಲೇಔಟ್‌ ಗೊಂದಲದ ಬಗ್ಗೆ ಸ್ಥಳಕ್ಕೆ ನಾನೇ ಬಂದು ನೋಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Karnataka Politics : ಸುಳ್ಳು ಹೇಳ್ಬೇಡಿ, ಕ್ಷಮೆ ಕೇಳೇ ಇಲ್ಲ ಎಂದು ಪರಮೇಶ್ವರ್‌ಗೆ ರಾಯರೆಡ್ಡಿ ಪತ್ರ!

ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಕಾಂಗ್ರೆಸ್ ಆಕ್ಷೇಪ?

ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಪತ್ರ ಬರೆದಿದೆ. ಕಿಸಾನ್ ಘಟಕದ ಅಧ್ಯಕ್ಷ ಸಚಿನ್‌ ಮೀಗಾ ಪತ್ರ ಬರೆದಿದ್ದು, ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ಯೋಜನೆಯಲ್ಲಿ ಕೇಂದ್ರ ಸರ್ಕಾರದ 2013ರ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ಪರಿಹಾರ ಮತ್ತು ಪುನರ್ ವಸತಿ ನೀಡಿ ಅನುಷ್ಠಾನಗೊಳಿಸಿ. ಇಲ್ಲವಾದಲ್ಲಿ ಯೋಜನೆಯನ್ನು ರದ್ದುಪಡಿಸಿ ರೈತರಿಗೆ ಮತ್ತು ಭೂಮಾಲೀಕರಿಗೆ ಎನ್‌ಒಸಿ ನೀಡುವಂತೆ ಘೋಷಣೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.

Exit mobile version