ಬೆಂಗಳೂರು: ಉತ್ತರ ಒಳನಾಡಲ್ಲಿ ಮಾತ್ರ ಪ್ರಭಾವ ಬೀರಿದ್ದ ಮಳೆರಾಯ ಈಗ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೂ ವ್ಯಾಪಿಸಿದ್ದಾನೆ. ಮುಂದಿನ 24 ಗಂಟೆಯಲ್ಲಿ (ಸೆ.6) ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚಿನ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಒಳನಾಡಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ (Weather report) ಇರಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಸುಳಿಗಾಳಿಯು ಎದ್ದಿದೆ. ಇದರ ಪ್ರಭಾವದಿಂದಾಗಿ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಲ್ಲಿ ವ್ಯಾಪಕವಾಗಿ ಕರಾವಳಿಯ ಪ್ರತ್ಯೇಕ ಕಡೆಗಳಲ್ಲಿ ಹೆಚ್ಚು ಮಳೆಯಾಗಲಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಸೆ. 6-7 ರಂದು ಸಾಧಾರಣ ಮಳೆಯಾದರೆ, 8-9ರಂದು ಭಾರಿ ಮಳೆಯಾಗಲಿದೆ. ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಲಿದೆ. ಪ್ರತಿ ಗಂಟೆಗೆ 55 ಕಿ.ಮೀ ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: High Court : ಹೆಣ್ಮಕ್ಕಳಿಗೆ ಮದುವೆ ಆಗೋವರೆಗೂ ಅಪ್ಪನೇ ಜೀವನಾಂಶ ಕೊಡಬೇಕಾಗಿಲ್ಲ ಎಂದ ಹೈಕೋರ್ಟ್; ಏನು ವಿಷಯ?
ಈ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ
ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು ಹಾಗೂ ಕೊಪ್ಪಳದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಯೆಲ್ಲೋ ಅಲಾರ್ಟ್ ನೀಡಲಾಗಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ಹಗುರ ಮಳೆಯಾಗಲಿದೆ. ಕೆಲವೊಮ್ಮೆ ಬಲವಾದ ಗಾಳಿ ಬೀಸಲಿದೆ. ಹೀಗಾಗಿ ಮರದಡಿ ನಿಲ್ಲದಂತೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯಾದ್ಯಂತ ನೈರುತ್ಯ ಮುಂಗಾರು ಸೋಮವಾರದಂದು ಉತ್ತರ ಒಳನಾಡಲ್ಲಿ ತೀವ್ರವಾಗಿದ್ದು, ದಕ್ಷಿಣ ಒಳನಾಡಲ್ಲಿ ಸಾಮಾನ್ಯವಾಗಿತ್ತು. ಆದರೆ ಕರಾವಳಿಯಲ್ಲಿ ದುರ್ಬಲಗೊಂಡಿತ್ತು. ಕಲಬುರಗಿಯ ಸೇಡಂನಲ್ಲಿ 8 ಸೆಂ.ಮೀ ಮಳೆಯಾಗಿದೆ.
ಧಾರಾಕಾರ ಮಳೆಗೆ ವಾಹನ ಸಂಚಾರ ಬಂದ್
ಗದಗ ಜಿಲ್ಲೆ ರೋಣ ತಾಲೂಕಿನ ಚಿಕ್ಕಮಣ್ಣೂರು ಹಾಗೂ ಸಂಧಿಗವಾಡ ಗ್ರಾಮದ ನಡುವಿನ ಹಳ್ಳಕೊಳ್ಳ ತುಂಬಿ ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್ ಆಗಿದೆ. ರಾತ್ರಿಯಿಡೀ ಧಾರಾಕಾರವಾಗಿ ಸುರಿದ ಮಳೆಗೆ ಸೇತುವೆ ಮೇಲೆ ತುಂಬಿ ಹರಿಯುತ್ತಿದೆ. ಇತ್ತ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಗ್ಯಾಸದ ಸಿಲಿಂಡರ್ ವಾಹನ ಸಿಲುಕಿ ಚಾಲಕರು ಪರದಾಡಿದರು. ಹಿರೇಹಳ್ಳಕ್ಕೆ ಮಲಪ್ರಭಾ ನದಿ ಸೇರುವುದರಿಂದ ಸಿಂಧನೂರು ಹೆಮ್ಮಡಗ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ