ಬೆಂಗಳೂರು: ಕರ್ನಾಟಕ ಕರಾವಳಿಯಲ್ಲಿ ಮಳೆಯ (Heavy Rain alert) ಆರ್ಭಟ ಜೋರಾಗಿದ್ದು, ಬೆಂಗಳೂರಲ್ಲಿ ವಾತಾವರಣ ತಂಪಾಗಿದೆ. ಕರಾವಳಿ, ಮಲೆನಾಡಿನಲ್ಲಿ ಜು.6, 7 ರಂದು ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ (Weather report) ಆರೆಂಜ್ ಅಲರ್ಟ್ ನೀಡಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡದಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗಲಿದ್ದು, ಗಾಳಿ ವೇಗವು ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಕೆಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಭಾಗದಲ್ಲಿ ಅತಿ ಹೆಚ್ಚು ಮಳೆ
ಮುಂದಿನ 24 ಗಂಟೆಯಲ್ಲಿ ಕರಾವಳಿ ಭಾಗವಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಅತಿಯಾದ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಗದಗ, ಧಾರವಾಡ, ರಾಯಚೂರು, ಕಲಬುರಗಿ ಹಾಗೂ ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರಕ್ಕೆ ಇಳಿಯದಂತೆ ಎಚ್ಚರ
ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 45-55 ಕಿ.ಮೀ ನಿಂದ 65 ಕಿ.ಮೀ ವೇಗದಲ್ಲಿ ಬೀಸುವ ವಾತಾವರಣ ಇರಲಿದೆ. ಮೀನುಗಾರರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಜತೆಗೆ ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದು, ಕರಾವಳಿ ತಾಲೂಕುಗಳಲ್ಲಿ 1ರಿಂದ 12ನೇ ತರಗತಿವರೆಗೆ ಎಲ್ಲ ಶಾಲೆ ಕಾಲೇಜುಗಳಿಗೆ ಇಂದು (ಜು.6) ರಜೆ ಘೋಷಣೆ ಮಾಡಲಾಗಿದೆ. ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಮನೆಗಳ ಸುತ್ತುವರಿದ ನೀರು
ಉಡುಪಿ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ನದಿಗಳು ತುಂಬಿವೆ. ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ ಬನ್ನಾಡಿ ಹಡೋಲಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಬನ್ನಾಡಿ ಹೊಳೆ ಮಧ್ಯದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮಳೆ ಹೀಗೆಯೇ ಮುಂದುವರೆದರೆ ಬಂದ್ ಆಗುವ ಸಾಧ್ಯತೆ ಕಂಡುಬಂದಿದೆ. ನೆರೆ ನೀರಿನಿಂದ ಮನೆಗಳು ಸುತ್ತುವರಿದಿವೆ. ಇನ್ನೂ ಹೆಚ್ಚಿನ ನೆರೆ ಏರಿಕೆ ಆದರೆ ರಕ್ಷಣಾ ಕಾರ್ಯದ ಅವಶ್ಯಕತೆ ಬೀಳಲಿದೆ.
ಉಡುಪಿಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೈಪಾಸ್ ಪರಿಸರದ ಜನ ಅಪಾಯದ ಅಂಚಿನಲ್ಲಿದ್ದಾರೆ. ಸುತ್ತಮುತ್ತ ನೀರು ತುಂಬಿಕೊಂಡಿದ್ದು, ನಿವಾಸಿಗಳು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿ ಪಾತ್ರದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ನಗರದ ಕಲ್ಸಂಕ, ಬಡಗುಪೇಟೆ ಬೈಲಕೆರೆ ಪರಿಸರದಲ್ಲಿ ನೆರೆಯ ಸ್ಥಿತಿ ಕಂಡುಬಂದಿದ್ದು, ತಗ್ಗು ಪ್ರದೇಶಗಳ ಜನರಿಗೆ ನೆರೆಯ ಭೀತಿ ಎದುರಾಗಿದೆ. ಈಗಾಗಲೇ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರಲ್ಲಿ ಕೂಲ್ ಕೂಲ್ ವೆದರ್
ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಕಡಿಮೆ ಆಗುವ ಸಾಧ್ಯತೆ ಇದ್ದು, ಥಂಡಿ ವಾತಾವರಣ ಇರಲಿದೆ. ಹೀಗಾಗಿ ಜನರಿಗೆ ಸ್ವಲ್ಪ ಚಳಿ ಚಳಿ ಅನುಭವವೂ ಆಗಲಿದೆ. ಈ ನಡುವೆ ಬಲವಾದ ಗಾಳಿಯೊಂದಿಗೆ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದ್ದರೂ ಮಳೆ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ: Monsoon Fashion: ಮಾನ್ಸೂನ್‌ನ ಉಲ್ಲಾಸ ಹೆಚ್ಚಿಸುವ ಬಣ್ಣ ಬಣ್ಣದ ಡಂಗ್ರೀಸ್
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 35 ಡಿ.ಸೆ – 22 ಡಿ.ಸೆ
ಗದಗ: 29 ಡಿ.ಸೆ – 21ಡಿ.ಸೆ
ಚಿತ್ರದುರ್ಗ: 26 ಡಿ.ಸೆ – 21 ಡಿ.ಸೆ
ಬೆಳಗಾವಿ: 27 ಡಿ.ಸೆ – 21 ಡಿ.ಸೆ
ಕಾರವಾರ: 30 ಡಿ.ಸೆ – 23 ಡಿ.ಸೆ
ಮಂಗಳೂರು: 26 ಡಿ.ಸೆ – 23 ಡಿ.ಸೆ
ಹೊನ್ನಾವರ:26 ಡಿ.ಸೆ- 24 ಡಿ.ಸೆ
ಬೆಂಗಳೂರು ನಗರ: 27 ಡಿ.ಸೆ – 20 ಡಿ.ಸೆ
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ