ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಶನಿವಾರ ಮಧ್ಯಾಹ್ನ ಬಿರುಗಾಳಿ ಸಹಿತ ಭಾರಿ (Karnataka rain) ಮಳೆಯಾಗಿದೆ. ಕಳೆದೆರಡು ದಿನಗಳಿಂದ ನಗರದಲ್ಲಿ ಮುಂಜಾನೆ ಹೊತ್ತು ಬಿಸಿಲು, ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ಇತ್ತು. ಬಿಸಿಲ ದಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ (Weather Report) ತಂಪೆರೆದಿದ್ದಾನೆ.
ಮಧ್ಯಾಹ್ನ 1.30ರ ಸುಮಾರಿಗೆ ದಿಢೀರ್ ಸುರಿದ ಮಳೆಗೆ ವೀಕೆಂಡ್ ಮೂಡ್‌ನಲ್ಲಿದ್ದವರಿಗೆ (Weekend mood) ನಿರಾಸೆ ಆಯಿತು. ಇತ್ತ ಕೆಲಸ ನಿಮಿತ್ತ ಹೊರಗೆ ಇದ್ದವರು ಮಳೆಗೆ ಸಿಲುಕಿ ಪರದಾಡುವಂತಾಯಿತು. ವಾಹನ ಸವಾರರು ಬಸ್ ನಿಲ್ದಾಣ, ಹೋಟೆಲ್, ಅಂಗಡಿಗಳ ಬಳಿ ಮಳೆಯಿಂದ ಆಶ್ರಯ ಪಡೆದುಕೊಂಡರು.
ಊಟದ ಸಮಯಕ್ಕೆ ಶುರುವಾದ ಮಳೆಯು ಸತತ ಒಂದು ಗಂಟೆಗಳ ಕಾಲ ಅಬ್ಬರಿಸಿತ್ತು. ನಗರದ ಕೋರಮಂಗಲ, ಶಾಂತಿನಗರ, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರ, ಶಿವಾಜಿನಗರ, ಬಿಟಿಎಂ ಲೇಔಟ್ ಸೇರಿದಂತೆ ಎಂ.ಜಿ ರಸ್ತೆ, ವಿಧಾನಸೌಧ ಸುತ್ತಮುತ್ತ ಗಾಳಿ ಸಹಿತ ಭಾರಿ ಮಳೆ ಸುರಿದಿದೆ.
ಇದನ್ನೂ ಓದಿ: Karnataka Rain: ವಿಜಯನಗರದಲ್ಲಿ ಬಿರು ಮಳೆ; ಶಾರ್ಟ್ ಸರ್ಕ್ಯೂಟ್‌ನಿಂದ 35ಕ್ಕೂ ಟಿವಿ, ಫ್ರಿಜ್‌ಗಳಿಗೆ ಹಾನಿ
ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ದ್ವಿಚಕ್ರ ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಸ್ಕೈ ವಾಕ್, ಅಂಡರ್ ಪಾಸ್‌ಗಳಲ್ಲಿ ಆಶ್ರಯ ಪಡೆದರು. ಕೆಲವೇ ಗಂಟೆಗಳ ಮಳೆಗೆ ಹಲವು ರಸ್ತೆಗಳಲ್ಲಿ ನೀರು ವಾಹನ ಸಂಚಾರಕ್ಕೆ ಅಡ್ಡಿ ಆಯಿತು.