ಬೆಂಗಳೂರು: ರಾಜ್ಯದಲ್ಲಿ ಮುಂಗಾರು (Southwest monsoon) ಚುರುಕುಗೊಂಡಿದ್ದು, ಕರಾವಳಿಯಲ್ಲಿ ತೀವ್ರತೆ ಹೆಚ್ಚಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ವರುಣಾರ್ಭಟ (Rain News) ಜೋರಾಗಿ ಇರಲಿದೆ. ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ ಮಳೆಯಾಗುವ ಎಚ್ಚರಿಕೆಯನ್ನು (Rain alert) ಹವಾಮಾನ ಇಲಾಖೆ (weather report) ನೀಡಿದೆ. ಜತೆಗೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಥಂಡಿ ವಾತಾವರಣ ಇರಲಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಂದೆರಡು ಕಡೆಗಳಲ್ಲಿ ಇದು ದುಪ್ಪಟ್ಟಾಗಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಜತೆಗೆ ಚಿತ್ರದುರ್ಗ, ದಾವಣಗೆರೆಯಲ್ಲಿ ಮಳೆಯಾರ್ಭಟ ಜೋರಾಗಿ ಇರಲಿದೆ.
ಉತ್ತರ ಒಳನಾಡಿನಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ
ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಅಬ್ಬರ ಇರಲಿದೆ. ಬೆಳಗಾವಿ, ಬೀದರ್, ಹಾವೇರಿಯಲ್ಲಿ ಮಾತ್ರ ಭಾರಿ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ವರುಣ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾನೆ.
65 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿರುವ ಬಿರುಗಾಳಿ
ರಾಜ್ಯಾದ್ಯಂತ ಗುಡುಗು, ಮಿಂಚಿನ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 40-55 ಕಿ.ಮೀ ಇರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದಲ್ಲಿ 65 ಕಿ.ಮೀ ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ರಾಜಧಾನಿಯಲ್ಲಿ ತುಂತುರ ಮಳೆ
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಒಂದೆರಡು ಬಾರಿ ಜೋರು ಮಳೆಯಾಗಲಿದೆ. ಬಿರುಗಾಳಿ ಸಹಿತ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಈ ಜಿಲ್ಲೆಯ ಶಾಲೆಗಳಿಗೆ ರಜೆ
ಚಿಕ್ಕಮಗಳೂರು ತಾಲೂಕಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಹೀಗಾಗಿ ಆಯ್ದ ಶಾಲಾ- ಕಾಲೇಜುಗಳಿಗೆ ಬಿಇಒ ರಜೆ ಘೋಷಿಸಲಾಗಿದೆ. ಜು.7ರಂದು ವಸ್ತಾರೆ, ಖಾಂಡ್ಯ ಆಲ್ದೂರು ,ಆವತಿ ಹೋಬಳಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಲೆನಾಡ ಮೂರು ತಾಲೂಕಾದ ಕೊಪ್ಪ, ಶೃಂಗೇರಿ, ಕಳಸದ ಅಂಗನವಾಡಿ, ಪ್ರಾರ್ಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಒಂದು ದಿನದ ಮಳೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿ ವೆಂಕಟರಾಜು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Rain News : ಮನೆ ಮೇಲೆ ಕುಸಿದ ಗುಡ್ಡ; ಒಳಗೆ ಸಿಲುಕಿದ್ದ ಒಬ್ಬ ಮಹಿಳೆ ಸಾವು, ಇನ್ನೊಬ್ಬರ ರಕ್ಷಣೆ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 31 ಡಿ.ಸೆ – 24 ಡಿ.ಸೆ
ಗದಗ: 30 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 27 ಡಿ.ಸೆ – 21 ಡಿ.ಸೆ
ಬೆಳಗಾವಿ: 27 ಡಿ.ಸೆ – 21 ಡಿ.ಸೆ
ಕಾರವಾರ: 30 ಡಿ.ಸೆ – 23 ಡಿ.ಸೆ
ಮಂಗಳೂರು: 28 ಡಿ.ಸೆ – 24 ಡಿ.ಸೆ
ಹೊನ್ನಾವರ: 29 ಡಿ.ಸೆ- 24 ಡಿ.ಸೆ
ಬೆಂಗಳೂರು ನಗರ: 28 ಡಿ.ಸೆ – 20 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ