Site icon Vistara News

Weather Report: ಕೊಪ್ಪಳದಲ್ಲಿ ಸಿಡಿಲು ಬಡಿದು ಕುರಿಗಾಹಿ ಸಾವು; ರಾಜ್ಯದ ಅಲ್ಲಲ್ಲಿ ಮಳೆಯಬ್ಬರ

rain effect

#image_title

ಕೊಪ್ಪಳ/ಗದಗ: ರಾಜ್ಯದ ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗಿದ್ದು, ಜನರು ಥಂಡಾ (Karnataka Rains) ಹೊಡೆದಿದ್ದಾರೆ. ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಬಳಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದರೆ, ಮತ್ತೊಬ್ಬ ಗಾಯಗೊಂಡಿದ್ದಾನೆ. ಮುಕ್ಕುಂಪಿಯ ಯಮನೂರಪ್ಪ (25) ಮೃತ ಯುವಕನಾಗಿದ್ದು, ಅಮರೇಶ (30) ಗಾಯಗೊಂಡವನಾಗಿದ್ದಾನೆ. ಮುಕ್ಕುಂಪಿ ಗ್ರಾಮದಿಂದ ಕುರಿ ಮೇಯಿಸಲು ಇವರಿಬ್ಬರು ಬಂದಿದ್ದರು. ಗಾಯಾಳನ್ನು ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಡಿಲು ಬಡಿದು ಕುರಿಗಾಹಿ ಬಲಿಯಾದ ವಿಷಯ ತಿಳಿದು ಜಮಾಯಿಸಿದ ಗ್ರಾಮಸ್ಥರು

ಕೊಪ್ಪಳದ ವಿವಿಧೆಡೆ ಗುಡುಗು ಸಹಿತ (Rain Effect) ಮಳೆಯಾಗಿದ್ದು, ಜೋರಾಗಿ ಬೀಸಿದ ಬಿರುಗಾಳಿಗೆ ಮನೆಯ ಚಾವಣಿ ಶೀಟ್‌ಗಳು ಹಾರಿ ಹೋದ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಇಂದಿರಾತಾಂಡದಲ್ಲಿ ಮನೆಯ ಚಾವಣಿ ಹಾರಿ ಕೆಲವೊಂದು ತಗಡಿನ ಶೀಟ್‌ಗಳು ಒಳಗಡೆ ಬಿದ್ದಿದೆ. ಗಾಬರಿಗೊಂಡ ಕುಟುಂಬದ ಸದಸ್ಯರು ಅಳುತ್ತಲೇ ಮನೆಯಿಂದ ಹೊರಗಡೆ ಬಂದಿದ್ದಾರೆ.

ಮನೆ ಒಳಗಿಂದ ಓಡಿ ಬಂದು ಅಪಾಯದಿಂದ ಪಾರಾದ ಕುಟುಂಬ

ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ತಗಡು ಬಿದ್ದ ಪರಿಣಾಮ ನಾಗರಾಜಪ್ಪ ಎಂಬುವವರಿಗೆ ಕಾಲಿಗೆ ಗಾಯವಾಗಿದೆ. ಇನ್ನು ಬಿರುಗಾಳಿ ಮಳೆಗೆ ರಸ್ತೆ ಮಧ್ಯ ಭಾಗದಲ್ಲಿ ಮರಗಳು ಧರೆಗುರುಳಿದ್ದವು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ಮಳೆಗೆ ಧರೆಗುರುಳಿದ ಮರ

ಮತದಾನಕ್ಕೂ ಮಳೆ ಅಡ್ಡಿ

ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಮತದಾನಕ್ಕೆ ಅರ್ಧ ಗಂಟೆ ಬಾಕಿ ಇರುವಾಗಲೇ ಮಳೆಯಾಗಿದೆ. ಜೋರಾದ ಮಳೆಗೆ ಮತಗಟ್ಟೆ ಕೊಠಡಿಯಲ್ಲಿ ನೀರು ತುಂಬಿತ್ತು. ಮಳೆ ನೀರಿನಲ್ಲಿಯೇ ಮತದಾರರು ಮತದಾನ ಮಾಡಿದರು. ಪಟ್ಟಣದ ಎಪಿಎಂಸಿಯ ಸಭಾಭವನದಲ್ಲಿರುವ ಮತಗಟ್ಟೆ ಒಳಾಂಗಣದಲ್ಲಿ ನೀರು ತುಂಬಿತ್ತು.

ಇದನ್ನೂ ಓದಿ: Weather report: ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಮಳೆ; ಉತ್ತರ, ದಕ್ಷಿಣ ಒಳನಾಡಲ್ಲಿ ವರುಣಾರ್ಭಟ

ದಾವಣಗೆರೆಯಲ್ಲೂ ಭಾರಿ ಮಳೆ

ದಾವಣಗೆರೆಯಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಕೆಲವೆಡೆ ಮತಕೇಂದ್ರಕ್ಕೆ ಬರಲು ಮತದಾರರು ಹಿಂದೇಟು ಹಾಕಿದರು. ಮಳೆ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬಾರದೆ ಜನರು ತೊಂದರೆ ಅನುಭವಿಸಿದ್ದರು. ಬೆಳಗ್ಗೆಯಿಂದ ಬಿಸಿಲು ಇದ್ದು, ಏಕಾಏಕಿ ದಾವಣಗೆರೆಯಲ್ಲಿ ಗಾಳಿ ಸಹಿತ ಭಾರಿ ಮಳೆಗೆ ಹಲವೆಡೆ ಮರಗಳು ನೆಲಕ್ಕುರುಳಿದ್ದವು. ಇದಲ್ಲದೆ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಕೆಲವು ಕಡೆ ಅಲ್ಲಲ್ಲಿ ಮಳೆಯಾದ ವರದಿಯಾಗಿವೆ.

Exit mobile version