ಬೆಂಗಳೂರು: ಮೋಚಾ ಚಂಡಮಾರುತ ಎಫೆಕ್ಟ್‌ನಿಂದಾಗಿ ರಾಜ್ಯದಲ್ಲಿ ವರುಣಾರ್ಭಟ (Karnataka Rain) ಜೋರಾಗಿದೆ. ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ (Rain alert) ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather update) ಮುನ್ಸೂಚನೆಯನ್ನು ನೀಡಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ (Weather Report) ಮಳೆಯಾಗುವ ಸಾಧ್ಯತೆ ಇದ್ದು, ಗಾಳಿ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯಲ್ಲೂ ಮಳೆ ಮುಂದುವರಿಯಲಿದೆ.
ಇದನ್ನೂ ಓದಿ: Karnataka Election : ಭಾರಿ ಮಳೆ; ಮಸ್ಟರಿಂಗ್ ಕೇಂದ್ರದಲ್ಲಿದ್ದ ಮರ ಬಿದ್ದು ನೆಲಕ್ಕುರುಳಿದ ಟೆಂಟ್
ರಾಜ್ಯದಲ್ಲಿ ಸೋಮವಾರ ಗರಿಷ್ಠ ಉಷ್ಣಾಂಶ 36.2 ಡಿಗ್ರಿ ಸೆಲ್ಸಿಯಸ್ ಶಿರಾಳಿಯಲ್ಲಿ ದಾಖಲಾಗಿದೆ. ರಾಜ್ಯಾದ್ಯಂತ ಮಳೆಯಾಗಿದ್ದು, ಹಾಸನದ ಸಕಲೇಶಪುರದಲ್ಲಿ 7 ಸೆಂ.ಮೀ ಮಳೆಯಾಗಿದೆ. ಈ ಸಂಬಂಧ ಹವಾಮಾನ ಇಲಾಖೆ ತಜ್ಞ ಎ. ಪ್ರಸಾದ್ ಪ್ರತಿಕ್ರಿಯಿಸಿದ್ದು, ಗಾಳಿ ದಿಕ್ಕಿನಲ್ಲಿ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್‌ನಷ್ಟು ಟ್ರಫ್ ಉಂಟಾಗಿದೆ. ಜತೆಗೆ ತೀವ್ರವಾದ ವಾಯುಭಾರ ಕುಸಿತದಿಂದಾಗಿ ಮೇ 10ರಂದು ಚಂಡಮಾರುತ ಎದ್ದೇಳುವ ಸಾಧ್ಯತೆ ಇದೆ.
ಹೀಗಾಗಿ ರಾಜ್ಯಾದ್ಯಂತ ಮೂರು ದಿನಗಳು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಚುನಾವಣಾ ಆಯೋಗಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ. ಬುಧವಾರ ಮಧ್ಯಾಹ್ನದ ಮೇಲೆ ಮಳೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ ಸಮಯ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಹೊತ್ತಿಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.