ಬೆಂಗಳೂರು: ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಬೆಂಗಳೂರು ಸಿಟಿ ಮಂದಿಗೆ ವರುಣ ತಂಪೆರೆದಿದ್ದಾನೆ. ರಾಜಧಾನಿ ಬೆಂಗಳೂರಿನ ಹಲವೆಡೆ ಶನಿವಾರ ಸಂಜೆ (ಮೇ 20) ಬಿರುಗಾಳಿ ಸಹಿತ ಭಾರಿ (Karnataka rain) ಮಳೆಯಾಗಿದೆ. ಕಳೆದೆರಡು ದಿನಗಳಿಂದ ನಗರದಲ್ಲಿ ಮುಂಜಾನೆ ಹೊತ್ತು ಬಿಸಿಲು, ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ಇತ್ತು. ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ (Weather Report) ತಂಪೆರೆದಿದ್ದಾನೆ.
ಸಂಜೆ ಸುಮಾರು 5 ಗಂಟೆಗೆ ಸುರಿದ ಮಳೆಯು ವಾಹನ ಸಂಚಾರರಿಗೆ ಭಾರಿ ಅಡ್ಡಿ ಮಾಡಿತು. ವೀಕೆಂಡ್ ಮೂಡ್‌ನಲ್ಲಿದ್ದ ಹಲವರಿಗೆ (Weekend mood) ನಿರಾಸೆ ಆಯಿತಾದರೂ, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಖುಷಿಗೊಂಡಿದ್ದಾರೆ. ಇತ್ತ ಕೆಲಸ ನಿಮಿತ್ತ ಹೊರಗೆ ಇದ್ದವರು ಮಳೆಗೆ ಸಿಲುಕಿ ಪರದಾಡುವಂತಾಯಿತು. ವಾಹನ ಸವಾರರು ಬಸ್ ನಿಲ್ದಾಣ, ಹೋಟೆಲ್, ಅಂಗಡಿಗಳ ಬಳಿ ಮಳೆಯಿಂದ ಆಶ್ರಯ ಪಡೆದುಕೊಂಡರು.
ನಗರದ ಕಾರ್ಪೋರೇಶನ್ ಸರ್ಕಲ್, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಸೇರಿ ವಿಧಾನಸೌಧ, ಬಾಳೇಕುಂದ್ರಿ ಸರ್ಕಲ್, ಶಿವಾಜಿನಗರ ಸುತ್ತಮುತ್ತ ಭಾರಿ ಮಳೆಯಾಗಿದೆ. ಇನ್ನೆರಡು ದಿನವೂ ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ನಿಲ್ದಾಣದ ಆಶ್ರಯ ಪಡೆದ ಜನರು
ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ದ್ವಿಚಕ್ರ ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಸ್ಕೈ ವಾಕ್, ಅಂಡರ್ ಪಾಸ್‌ಗಳಲ್ಲಿ ಆಶ್ರಯ ಪಡೆದರು. ಕೆಲವೇ ಗಂಟೆಗಳ ಮಳೆಗೆ ಹಲವು ರಸ್ತೆಗಳಲ್ಲಿ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿ ಆಯಿತು.
ಮೆಜೆಸ್ಟಿಕ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರೆಲ್ಲರೂ ನಿಲ್ದಾಣದಲ್ಲಿ ಆಶ್ರಯ ಪಡೆದುಕೊಂಡರು. ಗಾಳಿ ಸಹಿತ ಸುರಿದ ಮಳೆಗೆ ರಂಬೆಕೊಂಬೆಗಳೆಲ್ಲ ರಸ್ತೆಯಲ್ಲಿ ಬಿದ್ದಿದ್ದವು.
ಇದನ್ನೂ ಓದಿ: Weather Report: ರಾಜ್ಯದ ಹಲವೆಡೆ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆ; ಆದ್ರೆ ಇಲ್ಲಂತೂ ತಪ್ಪಲ್ಲ ಬಿಸಿಲು!
ಆಟೋ-ಬಿಎಂಟಿಸಿ ಬಸ್ ಮೇಲೆ ಬಿದ್ದ ಮರ
ಅಬ್ಬರದ ಮಳೆ ಸುರಿದ ಹಿನ್ನೆಲೆಯಲ್ಲಿ ಕಾರ್ಪೋರೇಷನ್ ಬಳಿ ಬಿಎಂಟಿಸಿ ಬಸ್ ಮೇಲೆ ಮರ ಉರುಳಿ ಬಿದ್ದಿದೆ. ಜತೆಗೆ ಆಟೋ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದೆ.
ನಗರದ ಕಾರ್ಪೋರೇಷನ್ ಬಳಿ ಮಳೆಯೆಂದು ರಸ್ತೆ ಬದಿ ಆಟೋವನ್ನು ನಿಲ್ಲಿಸಲಾಗಿತ್ತು. ಗಾಳಿ ಮಳೆಗೆ ಮರದ ಕೊಂಬೆ ಕಟ್ ಆಗಿ ಆಟೋ ಮೇಲೆ ಬಿದ್ದಿದೆ. ಆಟೋ ಸಂಪೂರ್ಣ ಹಾನಿಯಾಗಿದ್ದು, ಅದೃಷ್ಟವಶಾತ್ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಿರಿನಗರದಲ್ಲಿ ಧರೆಗುರುಳಿದ ಮರ, ವಾಹನಗಳು ಜಖಂ
ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿದೆ. ಬೆಂಗಳೂರಿನ ಗಿರಿನಗರದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಪರಿಣಾಮ ಮರದಡಿ ನಿಂತಿದ್ದ ಗೂಡ್ಸ್ ವಾಹನ, ನ್ಯಾನೋ ಕಾರು, ಬೈಕ್‌ಗಳ ಮೇಲೆ ಮರ ಬಿದ್ದು ಜಖಂಗೊಂಡಿದೆ. ಸದ್ಯ ಯಾವುದೇ ಪ್ರಾಣ ಹಾನಿ ಆಗಿಲ್ಲವೆಂದು ತಿಳಿದು ಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ