Site icon Vistara News

Weather Report: ಭಾರಿ ಮಳೆಗೆ ಬೆಂಗಳೂರಲ್ಲಿ ಬೈಕ್‌, ಕಾರುಗಳು ಮುಳುಗಡೆ; ಹೇಗಿರಲಿದೆ ಗೊತ್ತಾ ಮೋಚಾ ಚಂಡಮಾರುತ?

weather-report-Heavy rains affect Bengaluru

weather-report-Heavy rains affect Bengaluru

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬಂದರೂ ದೊಡ್ಡ ಮಟ್ಟದ ಸಮಸ್ಯೆಗಳು ತಲೆದೋರುತ್ತವೆ. ರಾಜಕಾಲುವೆಗಳು ಉಕ್ಕಿ ಆ ನೀರು ರಸ್ತೆಗಳಿಗೆ, ಮನೆಗಳಿಗೆ ನುಗ್ಗಿ ಜನರನ್ನು ಹೈರಾಣಾಗಿಸುತ್ತವೆ. ಸದ್ಯ ಗುರುವಾರ ಸಂಜೆ ಸುರಿದ ಮಳೆಯಿಂದ (Rain Effect) ಜನರು ಪರದಾಡುವಂತಾಗಿದೆ. ಕೆಲವು ಕಡೆ ಬೈಕ್‌, ಕಾರುಗಳು ಸೇರಿದಂತೆ ವಾಹನಗಳು ಮುಳುಗಿವೆ.

ಗುರುವಾರ ಸಂಜೆ 6ರ ಸುಮಾರಿಗೆ ಸುರಿದ ವ್ಯಾಪಕ ಮಳೆಯು ನಾನಾ ಅನಾಹುತವನ್ನೇ ಸೃಷ್ಟಿ ಮಾಡಿದೆ. ಮಾಗಡಿ ರಸ್ತೆಯ 9ನೇ ಅಡ್ಡರಸ್ತೆಯಲ್ಲಿ ಮೋರಿ ಒಡೆದ ಪರಿಣಾಮ, ಆ ನೀರು ಮನೆಗಳಿಗೆ ನುಗ್ಗಿದ್ದವು. ಜತೆಗೆ ರಸ್ತೆಯಲ್ಲಿದ್ದ ಬಹುತೇಕ ದ್ವಿಚಕ್ರ ವಾಹನಗಳು ಮುಳುಗಡೆ ಆಗಿದ್ದವು. ಜನರು ಹೊರಗೆ ಬರಲು ಆಗದೆ ಒಳಗೆ ಇರಲು ಆಗದೇ ಅತಂತ್ರಕ್ಕೆ ಸಿಲುಕುವಂತಾಯಿತು.

ಮತ್ತೊಂದು ಕಡೆ ಶಿವಾನಂದ ಸರ್ಕಲ್‌ನಲ್ಲಿ ಮೂರು ಅಡಿಯಷ್ಟು ನೀರು ನಿಂತಿದ್ದರಿಂದ ರಸ್ತೆಯೇ ಕಾಣದಂತಾಗಿ ವಾಹನ ಸವಾರರು ಪರದಾಡಬೇಕಾಯಿತು. ಬಸವನಗುಡಿ, ಟೌನ್ ಹಾಲ್, ಮೆಜೆಸ್ಟಿಕ್, ಮಲ್ಲೇಶ್ವರಂ ಸೇರಿ ಹಲವೆಡೆ ಭಾರಿ ಮಳೆಯಾಗಿದೆ.

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಬೃಹತ್‌ ಮರ

ಕಳೆದೊಂದು ವಾರದಿಂದ ಬೆಂಗಳೂರಲ್ಲಿ ಮಳೆ ಸುರಿಯುತ್ತಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್‌ ಮರವೊಂದು ಉರುಳಿ ಬಿದ್ದಿದೆ. ಕೆಂಗೇರಿ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕಾಗಮಿಸಿ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಮಾಡಿದರು. ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಯಿತು.

ಮೋಚಾ ಸೈಕ್ಲೋನ್‌ ಎಫೆಕ್ಟ್‌

ಮುಂದಿನ 48 ಗಂಟೆಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಎದುರಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮೇ 6 ರಂದು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಲಿದೆ ಎಂಬ ಮಾಹಿತಿಯಿದ್ದು, ಮೇ 7 ರಂದು ಬಂಗಾಳಕೊಲ್ಲಿ ಹಾಗೂ ಇತರ ಭಾಗಗಳಿಗೆ ಈ ಚಂಡಮಾರುತ ಅಪ್ಪಳಿಸಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Cyclone Mocha: ಮೇ 6ಕ್ಕೆ ಏಳಲಿದೆ ವರ್ಷದ ಮೊದಲ ಚಂಡಮಾರುತ ಮೋಚಾ; ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ತೀವ್ರತೆ ಹೆಚ್ಚಾದರೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆ ಭಾರಿ ಮಳೆಯಾಗಲಿದೆ.

Exit mobile version