Site icon Vistara News

Weather Report : ಕರಾವಳಿಯಲ್ಲಿ ನಾಳೆ ಮಳೆ ವೈಲೆಂಟ್‌; ದಕ್ಷಿಣ ಒಳನಾಡಿನಲ್ಲಿ ಫುಲ್‌ ಸೈಲೆಂಟ್‌!

Rain News

ಬೆಂಗಳೂರು: ರಾಜ್ಯಾದ್ಯಂತ ಮುಂದಿನ 4 ದಿನಗಳಲ್ಲಿ ಭಾರಿ ಮಳೆಯಾಗುವ (Rain news) ಸಾಧ್ಯತೆ ಇದ್ದು, ಹವಾಮಾನ ಇಲಾಖೆ (Weather report) ಯೆಲ್ಲೋ ಅಲರ್ಟ್‌ ನೀಡಿದೆ. ಮಹಾರಾಷ್ಟ್ರ ದಕ್ಷಿಣದಿಂದ ಕರಾವಳಿಯ ಉತ್ತರಕ್ಕೆ ಸಮುದ್ರದ ಮಟ್ಟದಲ್ಲಿ ಟ್ರಫ್‌ ಹಾದುಹೋಗಿದೆ. ಇದರ ಪ್ರಭಾವದಿಂದಾಗಿ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಉತ್ತರ ಒಳನಾಡಿನಲ್ಲಿ ಮಂಕಾಗಿದ್ದ ನೈರುತ್ಯ ಮುಂಗಾರು ಚುರುಕು ಪಡೆದುಕೊಂಡಿದೆ. ಜತೆಗೆ ಕರಾವಳಿಯಲ್ಲಿ ಮುಂಗಾರು ಮತ್ತಷ್ಟು ತೀವ್ರಗೊಂಡಿದೆ. ಮುಂದಿನ 48 ಗಂಟೆಯಲ್ಲಿ ಕರಾವಳಿ ಹಾಗೂ ಮಲೆನಾಡು ಸೇರಿ ಉತ್ತರ ಒಳನಾಡಿನಲ್ಲಿ ಬಿರುಗಾಳಿ ಜತೆಗೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

ಕಳೆದೊಂದು ವಾರದಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು. ಆದರೆ ಮುಂದಿನ ಮೂರು ದಿನಗಳು ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದೆ. ಹೀಗಾಗಿ ಯಾವುದೇ ಅಲರ್ಟ್‌ ನೀಡಿಲ್ಲ. ಜು.15ರಂದು ದಕ್ಷಿಣ ಒಳನಾಡಿನ ಜಿಲ್ಲೆಯಾದ ದಾವಣಗೆರೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆ ಇದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಭಾಗವಾದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಭಾಗವಾದ ಶಿವಮೊಗ್ಗ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವರುಣ ಗುಡುಗಲಿದ್ದಾನೆ.

ಇದನ್ನೂ ಓದಿ: Murder Case : ಆರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ತಾಯಿ; ಅವಳಿಗೇನು ಹುಚ್ಚಾ?

ಉತ್ತರ ಒಳನಾಡಿನ ಜಿಲ್ಲೆಯಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಬಹಳ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ.

65 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ

ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದೆ. ಬಿರುಗಾಳಿ ವೇಗವು ಉತ್ತರ ಒಳನಾಡಿನಲ್ಲಿ ಗಂಟೆಗೆ 55 ಕಿ.ಮೀ ತಲುಪಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 40 ಕಿ.ಮೀ ಇರುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 65 ಕಿ.ಮೀ ವೇಗದಲ್ಲಿ ಬೀಸಲುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version