ರಾಯಚೂರು: ಜಿಲ್ಲೆಯಲ್ಲಿ ಕೆಲವೆಡೆ ವರುಣಾಘಾತಕ್ಕೆ (Weather Report) ಜನರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಕಟಾವು ಮಾಡಿ ರಾಶಿ ಹಾಕಿದ್ದ ಭತ್ತವೆಲ್ಲವೂ ಮಳೆಗೆ ಕೊಚ್ಚಿ ಹೋಗಿದೆ.
ಗ್ರಾಮದ ಹುಸೇನಸಾಬ್, ರಾಜಾಸಾಬ್, ಅಜಿಸಾಬ್, ಹನುಮಂತ ರಾಯ ಎಂಬುವವರು ಭತ್ತದ ಕಟಾವು ಮಾಡಿ ಒಂದೇ ಕಡೆ ರಾಶಿ ಹಾಕಿದ್ದರು. ಸುಮಾರು 3 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಭತ್ತವನ್ನು ರಾಶಿ ಹಾಕಿದ್ದರು. ಆದರೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದ ಕಾರಣ ಭತ್ತವೆಲ್ಲವೂ ನೀರಲ್ಲಿ ನೆನೆದು ಕೊಚ್ಚಿ ಹೋಗಿದೆ. ಮಳೆಯಿಂದ ಇಷ್ಟೆಲ್ಲ ಅವಾಂತರವಾದರೂ, ರೈತರ ಸಹಾಯಕ್ಕೆ ದೇವದುರ್ಗದ ಅಧಿಕಾರಿಗಳು ಬಾರದಕ್ಕೆ ಅಸಮಾಧಾನ ಹೊರಹಾಕಿದ್ದರು.
ಗುರುವಾರವೂ ಇರಲಿದೆ ಮಳೆಯ ಅಬ್ಬರ
ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಹಾಗೂ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಕೆಲವು ಸೀಮಿತ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇದೆ. ಇನ್ನುಳಿದಂತೆ ಬಾಗಲಕೋಟೆ, ಧಾರವಾಡ, ರಾಯಚೂರು, ಕೊಪ್ಪಳ, ವಿಜಯಪುರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Assault Case: ಕಾಂಗ್ರೆಸ್‌ಗೆ ಮತ ಹಾಕಲ್ಲ ಎಂದವನಿಗೆ ಹಲ್ಲು ಮುರಿಯುವಂತೆ ಥಳಿಸಿದ ನಗರಸಭೆ ಸದಸ್ಯ!
ಹಾಗೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಹಾಗೂ ಶಿವಮೊಗ್ಗ, ರಾಮನಗರ ಸೇರಿದಂತೆ ಕರಾವಳಿಯ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.