ಚಿಕ್ಕಮಗಳೂರು/ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ಭಾರಿ ಮಳೆಗೆ (Rain News) ಸೇತುವೆಯೊಂದು (bridge) ಕುಸಿದಿದೆ. ಸೇತುವೆ ಮೇಲೆ ಪಿಕಪ್ ವಾಹನ ಸಂಚರಿಸುತ್ತಿದ್ದಾಗಲೇ ಕುಸಿದು ಬಿದ್ದಿದ್ದು, ಕೊದಲೆಳೆ ಅಂತರದಲ್ಲಿ ಪಿಕಪ್ ವಾಹನದ ಚಾಲಕ ಪಾರಾಗಿದ್ದಾರೆ.
ಸೇತುವೆಯ ಒಂದು ಬದಿಯಲ್ಲಿ ಪಿಕಪ್ ವಾಹನವು ಸಿಲುಕಿಕೊಂಡಿದ್ದರಿಂದ ಹೊರ ತೆಗೆಯಲು ಆಗದೆ ಹರಸಾಹಸ ಪಡಬೇಕಾಯಿತು. ಜೆಸಿಬಿ ಮೂಲಕ ಪಿಕಪ್ ವಾಹನವನ್ನು ಮೇಲಕ್ಕೆ ತೆಗೆಯಲಾಯಿತು. ಕಳೆದ ವರ್ಷ ನೆರೆ ಪ್ರವಾಹದ ಸಮಯದಲ್ಲೂ ಸೇತುವೆ ಕುಸಿದು ಬಿದ್ದಿತ್ತು. ಇದೀಗ ಆರಂಭದ ಮಳೆಯಲ್ಲೇ ಹೊಸ ಸೇತುವೆ ಕುಸಿದು ಬಿದ್ದಿದೆ. ಪರಿಣಾಮ ಚೌಡಿಬಿಳಕಲ್, ಕಟ್ಟಿಮನಿ ಕೋಣೆಮನೆ, ಈಚಲಹೊಳೆ, ಚಿಕ್ಕ ನಾಡು, ಗುಬ್ರಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕಳಪೆ ಕಾಮಗಾರಿಗೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ
ರಾಜ್ಯಾದ್ಯಂತ ಮಳೆ (Karnataka Rain) ಅಬ್ಬರಿಸುತ್ತಿದೆ. ದಾವಣಗೆರೆಯ ವಿವಿಧೆಡೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಆಗುತ್ತಿದೆ. ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ.
ಮರದ ಪಕ್ಕದಲ್ಲೇ ಹೈ ಟೆನ್ಷನ್ ವೈರ್‌ವು ಹಾದುಹೋಗಿದ್ದು, ಕ್ಷಣ ಕಾಲ ಆತಂಕವನ್ನು ಸೃಷ್ಟಿಸಿತ್ತು. ಅದೃಷ್ಟವಶಾತ್ ಅಕ್ಕ ಪಕ್ಕ ಜನರು ಯಾರು ಇರದ ಕಾರಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಅಲ್ಲಿನ ಸ್ಥಳೀಯರು ಹೊತ್ತಿ ಉರಿಯುತ್ತಿದ್ದ ಮರವನ್ನು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡಿಂಗ್ ಮಾಡಿದ್ದಾರೆ.
ಮತ್ತೊಂದು ಕಡೆ ಜಗಳೂರಿನಲ್ಲಿ ಬಿರುಗಾಳಿ ಸಹಿತ ಬಂದ ಮಳೆಗೆ ರೈತರು ಕಂಗಾಲಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಭತ್ತದ ಬೆಳೆ ನೀರುಪಾಲಾಗಿದೆ. ಕಟಾವಿಗೆ ಬಂದಿದ್ದ ಭತ್ತದ ಗದ್ದೆಯು ಕೆರೆಯಂತಾಗಿತ್ತು. ಜತೆಗೆ ಬೇಸಿಗೆಯಲ್ಲಿ ಬೆಳೆದ ತರಕಾರಿ ಕೂಡ ಮಳೆಯಿಂದ ಹಾನಿಯಾಗಿದೆ.