Site icon Vistara News

Weather report : ಸೆ.4ರಂದು ಬೆಂಗಳೂರು ಸೇರಿ ಉತ್ತರ ಒಳನಾಡಲ್ಲಿ ಜೋರು ಮಳೆ

Women walking in rain with umbreala

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ (Weather report) ಮಳೆಯಾಗಲಿದೆ. ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಲಘು ಮಳೆಯ (Rain News) ಸೂಚನೆ ಇದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ.

ಬೆಂಗಳೂರಲ್ಲಿ ಸಾಧಾರಣ

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಿರಂತರ ಮಳೆಗೆ ಚಂದ್ರಂಪಳ್ಳಿ ಜಲಾಶಯ ಭರ್ತಿ

ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲಿ ಭಾರೀ ಮಳೆಗೆ ಚಂದ್ರಂಪಳ್ಳಿ ಜಲಾಶಯ ಭರ್ತಿಯಾಗಿದೆ. ಐನೋಳ್ಳಿ ಗ್ರಾಮದ ಬಸವಣ್ಣ ದೇವಸ್ಥಾನ ಜಲಾವೃತಗೊಂಡಿದೆ. ಜಲಾಶಯದಿಂದ ಎರಡು ಗೇಟ್ ಮೂಲಕ 1200 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಅಬ್ಬರದ ಮಳೆಗೆ ಚಿಂಚೋಳಿ ತಾಲೂಕಿನಲ್ಲಿ ಹಳ್ಳ- ಕೊಳ್ಳ ತುಂಬಿ ಹರಿಯುತ್ತಿದೆ.

ರಾತ್ರಿ ಸುರಿದ ಮಳೆಗೆ ಕುಸಿದ ಮನೆಗಳು

ಯಾದಗಿರಿ ಜಿಲ್ಲೆಯಲ್ಲಿ ವರುಣನ ಅರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಮಳೆ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಮಳೆ ನೀರು ಜಮೀನಿನಲ್ಲಿ ನುಗ್ಗಿ ಹತ್ತಿ ಬೆಳೆ ನಾಶವಾಗಿವೆ. ಮಳೆ ಬಂದರೂ ಕಷ್ಟ, ಬಾರದೆ ಇದ್ದರೂ ನಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಮಳೆ ಸುರಿದಿದೆ. ನಿನ್ನೆ ಶನಿವಾರ ರಾತ್ರಿಯಿಂದ ಸುರಿದ ಮಳೆಗೆ ದೋರನಹಳ್ಳಿ ಗ್ರಾಮದ ಮಾರ್ಥಂಡಪ್ಪ, ನಿರ್ಮಲಮ್ಮ ಅವರ ಎರಡು ಮನೆಗಳು ಕುಸಿದಿದೆ.

ಇದನ್ನೂ ಓದಿ: Assault Case : ಗಲ್ಲಿ ಕ್ರಿಕೆಟ್ ಕಿರಿಕ್; ಯುವಕನ ಹೃದಯಕ್ಕೆ ಚೂರಿ ಇರಿತ

ಒಳನಾಡಿನಲ್ಲಿ ಮುಂಗಾರು ಚುರುಕು

ನೈರುತ್ಯ ಮುಂಗಾರು ಶನಿವಾರದಂದು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿಯಲ್ಲಿ ದುರ್ಬಲವಾಗಿತ್ತು. ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕಲಬುರಗಿಯ ಚಿತ್ತಾಪುರಲ್ಲಿ 11 ಸೆಂ.ಮೀ ಹಾಗೂ ಸೇಡಂನಲ್ಲಿ 10, ಚಿಕ್ಕಬಳ್ಳಾಪುರದ ತೊಂಡೇಭಾವಿ ಹಾಗೂ ಮಂಡ್ಯದ ಬೆಳ್ಳೂರಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ.

ಶಹಪುರ 5, ಚಿಂಚೋಳಿ, ಆಳಂದ, ಅಫಜಲಪುರ ಎಚ್‌ಎಂಎಸ್ ಹಾಗೂ ದೊಡ್ಡಬಳ್ಳಾಪುರ, ಚಿಂತಾಮಣಿ ತಲಾ 4 ಸೆಂ.ಮೀ ಮಳೆಯಾಗಿದೆ. ಜೇವರ್ಗಿ, ನೆಲೋಗಿ, ಯಡ್ರಾಮಿ, ಕೆಂಭಾವಿ, ದೇವದುರ್ಗ, ಚಿಕ್ಕಬಳ್ಳಾಪುರ ತಲಾ 3 ಸೆಂ.ಮೀ ಮಳೆಯಾಗಿದೆ. ಜಾಲಹಳ್ಳಿ, ಕಲಬುರಗಿ, ಗುಬ್ಬಿ, ಬರಗೂರು, ರಾಯಲ್ಪಾಡು ತಲಾ 2 ಸೆಂ.ಮೀ ಹಾಗೂ ಕಮಲಾಪುರ, ಕಲಬುರಗಿ ಎಡಬ್ಲ್ಯುಎಸ್, ಹುಣಸಗಿ, ಮಂಠಾಳ, ಸಿಂದಗಿ, ಮಾಲೂರು, ಕೋಲಾರ, ಭಾಗಮಂಡಲದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version