ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (weather report) ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ವರುಣಾರ್ಭಟ ಜೋರಾಗಿ ಇರಲಿದೆ. ಹಾಸನ ಜಿಲ್ಲೆಯಾದ್ಯಂತ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಕಲಬುರಗಿ ಹಾಗೂ ಯಾದಗಿರಿಯಲ್ಲೂ ಮಳೆಯ ಅಬ್ಬರ ಇರಲಿದೆ.
ಬಿರುಗಾಳಿಯ ವೇಗವು ರಾಜ್ಯದಲ್ಲಿ ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ವಾತಾವರಣ ಇರಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಲಘು ಮಳೆಯಾಗಲಿದೆ. ಕೆಲವೊಮ್ಮೆ ಗರಿಷ್ಠ ಉಷ್ಣಾಂಶ 27 ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Rain News : ರಾತ್ರಿಯಿಡಿ ಸುರಿದ ಮಳೆ ಎಫೆಕ್ಟ್; ಮನೆಗಳಿಗೆ ನುಗ್ಗಿದ ನೀರು, ಉರುಳಿದ ಮರಗಳು
ಕೊಡಗಿನಲ್ಲಿ ಭಾರಿ ಮಳೆಗೆ ಧರೆಗುರುಳಿದ ಮರಗಳು
ಕೊಡಗಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಭಾಗಮಂಡಲ-ಕರಿಕೆ ನಡುವಿನ ರಸ್ತೆಯ ಹಲವೆಡೆಗಳಲ್ಲಿ ಬರೆ ಕುಸಿದಿದೆ. ರಸ್ತೆ ಬದಿಯ ಬರೆ ಕುಸಿದು ಮರಗಳು ರಸ್ತೆಗೆ ಉರುಳಿವೆ. ಇದರಿಂದಾಗಿ ಕೊಡಗು- ಕೇರಳ ಸಂಪರ್ಕ ಕಲ್ಪಿಸುವ ಭಾಗಮಂಡಲ – ಕರಿಕೆ ರಸ್ತೆ ಬಂದ್ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬರೆ ಹಾಗೂ ಮರಗಳನ್ನು ತೆರವುಗೊಳಿಸುತ್ತಿದ್ದಾರೆ.
ಇತ್ತ ಹೈಸೋಡ್ಲೂರು – ಬಿರುನಾಣಿ ರಸ್ತೆಯಲ್ಲಿ ಗಾಳಿ ಮಳೆಗೆ ಮರವೊಂದು ಬಿದ್ದಿದೆ. ಪೊನ್ನಂಪೇಟೆ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಭಾರಿ ಗಾಳಿಗೆ ಜಿಲ್ಲೆಯ ಹಲವೆಡೆ ಮನೆಗಳ ತಗಡಿನ ಶೀಟ್‌ಗಳು ಹಾರಿಹೋಗಿವೆ. ಕ್ಷಣ ಕ್ಷಣಕ್ಕೂ ಗಾಳಿ ಮಳೆಯು ಹೆಚ್ಚಾಗುತ್ತಿದ್ದು, ಜನರು ಭೀತಿಗೊಂಡಿದ್ದಾರೆ.
ನಿರಂತರ ಮಳೆಗೆ ಸೋರುತಿಹುದು ಕಾಲೇಜು ಕೊಠಡಿಗಳು
ಧಾರವಾಡದ ಆರ್‌ಎನ್ ಶೆಟ್ಟಿ ಕ್ರೀಡಾಂಗಣ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕೊಠಡಿಗಳು ಮಳೆ ನೀರು ಸೋರುತ್ತಿದೆ. ಸೋರುತ್ತಿರುವ ಕೊಠಡಿಯಲ್ಲೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಚಿತ್ರಣ ಕಂಡು ಬಂದಿದೆ. ಸದ್ಯ ಕೊಠಡಿಯಲ್ಲಿ ನೀರು ಸೋರಿ ನೆಲವು ಗಲೀಜಾಗಿದೆ. ಮೇಲ್ಛಾವಣಿ ಸಂಪೂರ್ಣ ಹಾಳಾಗಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳು ಹೊಂದಿರುವ ಕಾಲೇಜಿನಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ