ಬೆಂಗಳೂರು: ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇನ್ನೆರಡು ದಿನಗಳು ಮಳೆ (Rain News) ಮುಂದುವರಿಯಲಿದೆ. ಈ ಸಂಬಂಧ ಹವಾಮಾನ ಇಲಾಖೆ (weather Report) ಮುನ್ಸೂಚನೆಯನ್ನು ನೀಡಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಹಾವೇರಿ, ಧಾರವಾಡ ಮತ್ತು ಬೆಳಗಾವಿಯ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ವಿಜಯನಗರ, ಬಳ್ಳಾರಿ, ಗದಗ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ತುಮಕೂರು ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಗುಡುಗು, ಸಿಡಿಲಿನ ಅಬ್ಬರ
ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಗುಡುಗು ಮಿಂಚಿನ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಸಮುದ್ರಕ್ಕೆ ಇಳಿಯದಂತೆ ಸೂಚನೆ
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Manja Thread: ಬೈಕ್ ಸವಾರರ ಕಂಠಕ್ಕೆ ಕಂಟಕವಾಯ್ತು ಗಾಳಿಪಟ ದಾರ; ರಸ್ತೆಯಲ್ಲಿ ತಪ್ಪದ ಸಂಚಕಾರ
ಕಾದ ಕಾವಲಿಯಾದ ಕಲಬುರಗಿ
ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 41.6 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ. ಉಳಿದಂತೆ ವಿಜಯಪುರದ ತಾಳಿಕೋಟೆ, ಬೈಲಹೊಂಗಲದಲ್ಲಿ ತಲಾ 4ಸೆಂ.ಮೀ ಮಳೆಯಾಗಿದೆ. ಬಿ ಬಾಗೇವಾಡಿಯಲ್ಲಿ 3 ಸೆಂ.ಮೀ ಹಾಗೂ ಶಿರಾಳಿ, ಮುನಿರಾಬಾದ್, ಬೀದರ್ ನಗರ, ಬೀದರ್ ವೀಕ್ಷಣಾಲಯದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಕಾರವಾರ, ಸಿದ್ದಾಪುರ, ನಿಟ್ಟೂರು, ರಾಜೇಶ್ವರ್, ಸೇಡಂ, ನರಗುಂದ, ವೈ ಎನ್ ಹೊಸಕೋಟೆಯಲ್ಲಿ ತಲಾ 1 ಸೆಂ.ಮೀ ಮಳೆ ಸುರಿದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ