ಬೆಂಗಳೂರು: ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather Update) ಮುನ್ಸೂಚನೆಯನ್ನು ನೀಡಿದೆ. ಮೇ 8-9ರಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ಜಿಟಿ ಜಿಟಿ ಮಳೆ ಶುರುವಾಗಿ (Karnataka Rain news) ಭಾರಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಚಿಕ್ಕಮಗಳೂರು, ಚಿತ್ರದುರ್ಗ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಜಿಟಿ ಜಿಟಿ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉತ್ತರ ಒಳನಾಡಿನ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
ಮೈಸೂರಲ್ಲಿ ಭಾರಿ ಮಳೆ ದಾಖಲೆ
ರಾಜ್ಯದಲ್ಲಿ ಶನಿವಾರ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಒಣ ಹವೆ ಇತ್ತು. ಮೈಸೂರಿನ ಹುಣಸೂರಿನಲ್ಲಿ 7 ಸೆಂ.ಮೀ. ಮಳೆಯಾಗಿದೆ. ರಾಮನಗರ, ಹುಣಸೂರಲ್ಲಿ ತಲಾ 6 ಸೆಂ.ಮೀ ಹಾಗೂ ಮಾಲೂರು, ವೈ.ಎನ್. ಹೊಸಕೋಟೆ, ಕನಕಪುರ ತಲಾ 5 ಸೆಂ.ಮೀ. ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ?
ರಾಯಚೂರು, ಸರಗೂರು, ಪರಶುರಾಂಪುರ, ಕೃಷ್ಣರಾಜಸಾಗರ ತಲಾ 4 ಸೆಂ.ಮೀ ಹಾಗೂ ಸೈದಾಪುರ, ಹಾಸನ, ಕುಣಿಗಲ್, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲಾ 3 ಸೆಂ.ಮೀ ಮಳೆಯಾಗಿದೆ. ಖಜೂರಿ, ತಿರುಮಲ ನರಸೀಪುರ, ಚಾಮರಾಜನಗರ, ಕೃಷ್ಣರಾಜಪೇಟೆ, ಚಿತ್ರದುರ್ಗದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೀದರ್, ಬೀದರ್ ಪಿಟಿಒ, ಗೋಣಿಕೊಪ್ಪಲು, ಹರದನಹಳ್ಳಿ, ಶ್ರೀರಂಗಪಟ್ಟಣ ಚಿಕ್ಕನಹಳ್ಳಿ, ಬೆಳ್ಳೂರು, ಮೈಸೂರಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ. ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.