Site icon Vistara News

Weather Report: ಕರಾವಳಿ, ಒಳನಾಡಲ್ಲಿ ತಾಪಮಾನ ಏರಿಕೆ ಎಚ್ಚರಿಕೆ; ಚಿಕ್ಕಮಗಳೂರು, ತುಮಕೂರಲ್ಲಿ ಮಳೆ ಸಾಧ್ಯತೆ

#image_title

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಮಳೆ (Karnataka Rain) ಪ್ರಮಾಣ ತಗ್ಗಿದ್ದು, ಮುಂದಿನ 48 ಗಂಟೆಯಲ್ಲಿ ತಾಪಮಾನ ಏರಿಕೆ ಆಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather update) ನೀಡಿದೆ. ಗರಿಷ್ಠ ಉಷ್ಣಾಂಶವು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸೋಮವಾರ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಣಹವೆ ಇತ್ತು.

ಹೀಟ್ ಸ್ಟ್ರೋಕ್ ಕಂಟಕ

ಕೂಲ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ಸದ್ಯ ಹಾಟ್ ಸಿಟಿ ಆಗಿ ಬದಲಾಗುತ್ತಿದೆ. ಬಿಸಿಲ ಝಳಕ್ಕೆ ಮನೆಯಿಂದ ಹೊರ ಬರಲು ಜನರು ಹೆದರುತ್ತಿದ್ದಾರೆ. ಈ ಮಧ್ಯೆ ಹೀಟ್ ಸ್ಟ್ರೋಕ್ ಬಗ್ಗೆ ಎಚ್ಚರವಾಗಿರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕಳೆದೊಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತಾಪಮಾನ ಏರಿಕೆ ಕಂಡಿದೆ. ಈ ತೀವ್ರವಾದ ಬಿಸಿಲಿಗೆ ಹೆಚ್ಚು ಸಮಯ ಮೈ ಒಡ್ಡಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ವೈದ್ಯರು ಸೂಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಾಪಮಾನ ಏರಿಕೆ ಆಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ತೀವ್ರವಾದ ಬಿಸಿಲಿನಲ್ಲಿ ದೇಹವು ಅಧಿಕ ಬಿಸಿಯಾಗುವುದರಿಂದ ಹೀಟ್ ಸ್ಟೋಕ್ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ತಾಪಮಾನದಲ್ಲಿ ದೀರ್ಘಾವಧಿಗೆ ಮೈ ಒಡ್ಡುವಿಕೆ ಅಥವಾ ಬಿಸಿಲಿನಲ್ಲಿ ಕೆಲಸ ನಿರ್ವಹಿಸುವುದು ಅಪಾಯ ಎಂದು ತಜ್ಞರು ತಿಳಿಸಿದ್ದಾರೆ. ದೇಹದ ಉಷ್ಣತೆಯು 40c ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗಲಿದೆ ಎಂದಿದ್ದಾರೆ.

ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯಾಗುವವರೆಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ತಿಳಿಸಿದ್ದಾರೆ. ಬೈಕ್, ಕಾರು ಸವಾರರು, ರಸ್ತೆ ಬದಿ ವ್ಯಾಪಾರಿಗಳು, ಚುನಾವಣಾ ರ‍್ಯಾಲಿ ಪ್ರಚಾರ ಮಾಡುವವರು ಹಾಗೂ ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಹೆಚ್ಚು ಸಮಯ ಕಳೆಯದಂತೆ ಪ್ಲಾನ್ ಮಾಡಿಕೊಳ್ಳುವುದು ಒಳಿತು ಎಂದಿದ್ದಾರೆ.

ಇದನ್ನೂ ಓದಿ: Heatwaves In Bengaluru: ಬೆಂಗಳೂರಲ್ಲಿ ಬಿಸಿಲ ಬೇಗೆ; ತತ್ತರಿಸಿರುವ ಪೌರಕಾರ್ಮಿಕರಿಗೆ ಅರ್ಧ ದಿನ ರಜೆಗೆ ಎಐಸಿಸಿಟಿಯು ಒತ್ತಾಯ

ಹೊರಗೆ ಹೋಗಲು ಯಾವುದು ಬೆಸ್ಟ್‌ ಟೈಂ?

ಸುಡು ಬಿಸಿಲಿನ ಕಾರಣಕ್ಕೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ತನಕ ಹೊರಗೆ ಹೋಗದಂತೆ ವೈದ್ಯರು ಎಚ್ಚರಿಸಿದ್ದಾರೆ. ಏನೇ ಕೆಲಸ ಇದ್ದರೂ ಬೆಳಗ್ಗೆ 11 ಗಂಟೆಯೊಳಗೆ, 4 ಗಂಟೆ ನಂತರ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಒಂದು ವೇಳೆ ಹೋಗಲೇಬೇಕಾದ ಪರಿಸ್ಥಿತಿ ಇದ್ದರೆ, ತಲೆಗೆ ಟೋಪಿ ಅಥವಾ ಕೊಡೆ ಹಿಡಿದು ಬಿಸಿಲಿನಿಂದ ರಕ್ಷಣೆ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಸಾಧ್ಯವಾದಷ್ಟು ದೇಹವನ್ನು ನಿರ್ಜಲಿಕರಣ ಆಗದಂತೆ ನೋಡಿಕೊಳ್ಳಲು ನೀರು, ಮಜ್ಜಿಗೆ, ಎಳನೀರು, ಹಣ್ಣಿನ ಜ್ಯೂಸ್ ಕುಡಿಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Exit mobile version