ಬೆಂಗಳೂರು: ಬೀದರ್‌ನಲ್ಲಿ ಬಿರುಗಾಳಿ ಬೀಸಿದರೆ, ಕಲಬುರಗಿಯಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಎಚ್ಚರಿಕೆಯನ್ನು (rain News) ಹವಾಮಾನ ಇಲಾಖೆ (Weather Report) ನೀಡಿದೆ. ಮೇ 6, 7 ರಂದು ಬಹುತೇಕ ದಕ್ಷಿಣ ಹಾಗೂ ಉತ್ತರ ಒಳನಾಡು ಸೇರಿದಂತೆ ಕರಾವಳಿಯಲ್ಲಿ ಮಳೆಯ ಅಬ್ಬರ ಇರಲಿದೆ.
ಮಳೆಯ ಜತೆಗೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀನಷ್ಟು ಇರಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಹಾವೇರಿ, ಧಾರವಾಡ ಮತ್ತು ಬೆಳಗಾವಿಯ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ವಿಜಯನಗರ, ಬಳ್ಳಾರಿ, ಗದಗ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ತುಮಕೂರು ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾತ್ರಿ ಸುರಿದ ಮಳೆಗೆ ಕೆರೆಯಂತಾದ ಅಂಡರ್‌ಪಾಸ್
ಸೋಮವಾರ ರಾತ್ರಿ ಸುರಿದ ಸಾಧಾರಣ ಮಳೆಗೆ ತುಮಕೂರು ನಗರದ ಅಂತರಸನಹಳ್ಳಿ ಮಾರುಕಟ್ಟೆ ಬಳಿಯ ಅಂಡರ್‌ಪಾಸ್ ಕೆರೆಯಂತಾಗಿದೆ. ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ಪರದಾಡಬೇಕಾಯಿತು. ಈಗಾಗಲೇ ರಾಜ್ಯ ಸರ್ಕಾರ ಯಾವುದೇ ರೀತಿಯ ಮಳೆ ಅವಘಡಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲು ಆಯಾ ಜಿಲ್ಲಾಡಳಿತಗಳಿಗೆ ಸೂಕ್ತ ನಿರ್ದೇಶನ ನೀಡಿದೆ. ಆದರೆ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: Monsoon Driving: ಮಳೆಗಾಲದಲ್ಲಿ ಕಾರು ಪ್ರಯಾಣಕ್ಕೆ ಹೊರಡುವಾಗ ಈ ಟಿಪ್ಸ್ ಗಮನದಲ್ಲಿರಲಿ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 42 ಡಿ.ಸೆ – 25 ಡಿ.ಸೆ
ಗದಗ: 36 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 23 ಡಿ.ಸೆ
ಬೆಳಗಾವಿ: 35 ಡಿ.ಸೆ – 22 ಡಿ.ಸೆ
ಕಾರವಾರ: 36 ಡಿ.ಸೆ – 27 ಡಿ.ಸೆ
ಮಂಗಳೂರು: 35 ಡಿ.ಸೆ – 26 ಡಿ.ಸೆ
ಹೊನ್ನಾವರ: 33 ಡಿ.ಸೆ- 25 ಡಿ.ಸೆ
ಬೆಂಗಳೂರು ನಗರ: 32 ಡಿ.ಸೆ – 22 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ