Site icon Vistara News

Weather Report : ಬಿರುಗಾಳಿ ಸಹಿತ ಭಾರಿ ಮಳೆ; ಮುಂದಿನ 48 ಗಂಟೆ ಈ ಜಿಲ್ಲೆಯವರು ಎಚ್ಚರವಾಗಿರಿ

Rain in karnataka

ಬೆಂಗಳೂರು: ರಾಜ್ಯದಲ್ಲಿ ಜು.18-19ರಂದು ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ (Rain Alert) ಮಳೆಯಾದರೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಸಾಧಾರಣ ಮಳೆಯಾಗುವ (Weather report) ಸಾಧ್ಯತೆ ಇದೆ.

ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಯಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಸಾಧ್ಯತೆ ಇದೆ. ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಬೀಸಲಿದೆ.

ಉತ್ತರ ಒಳನಾಡಿನಲ್ಲಿ ಮಳೆ ಅಬ್ಬರ

ಉತ್ತರ ಒಳನಾಡಿನ ಜಿಲ್ಲೆಯಾದ ಬೀದರ್, ಬೆಳಗಾವಿ, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದೆ. ಪ್ರತ್ಯೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆಯಿದೆ.

ಮೋಡ ಕವಿದ ವಾತಾವರಣ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಒಂದೆರಡು ಬಾರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮೀನುಗಾರರಿಗೆ ಎಚ್ಚರಿಕೆ

ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀ ಇಂದ 55 ಕಿಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಹಲವೆಡೆ ಸೋನೆ ಮಳೆ

ಯಾದಗಿರಿ, ಕೊಪ್ಪಳದಲ್ಲಿ ಜಿಟಿ ಜಿಟಿ ಮಳೆ

ಮಂಗಳವಾರ ಯಾದಗಿರಿ ನಗರದಲ್ಲಿ ನಸುಕಿನ ಜಾವದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇತ್ತ ಜೋರಾಗಿಯೂ ಬರದೆ ಸಣ್ಣ ಸಣ್ಣ ಮಳೆ ಹನಿ ಬೀಳುತ್ತಿದ್ದು, ಜನರು ಕೊಡೆ ಹಿಡಿದುಕೊಂಡು ಕೆಲಸಕ್ಕೆ ತೆರಳುತ್ತಿರುವ ದೃಶ್ಯ ಕಂಡು ಬಂತು. ಬರದ ಛಾಯೆ ಇದ್ದ ಕಲಬುರಗಿಯಲ್ಲೂ ಬೆಳಗ್ಗೆಯಿಂದ ಮಳೆಯಾಗುತ್ತಿದೆ. ಮಳೆಯಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ಈ ವರ್ಷದ ಮೊದಲ ಮುಂಗಾರು ಮಳೆ ಈಗ ಆರಂಭವಾಗಿದೆ. ಕೊಪ್ಪಳದಲ್ಲೂ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದ್ದು, ಜಿಟಿಜಿಟಿ ಮಳೆಯಿಂದಾಗಿ ಶಾಲಾ- ಕಾಲೇಜು, ಕಚೇರಿಗಳಿಗೆ ಹೋಗುವವರು ಪರದಾಟಬೇಕಾಯಿತು. ಬೆಳಿಗ್ಗೆಯಿಂದ ನಿರಂತರವಾಗಿ ಸೋನೆ ಮಳೆ ಸುರಿಯುತ್ತಿದೆ.

ಜಿಟಿ ಜಿಟಿ ಮಳೆಗೆ ಕೊಡೆ ಮೊರೆ ಹೋದ ಜನರು

ಕಾರವಾರದಲ್ಲೂ ಧಾರಕಾರ ಮಳೆಗೆ ಧರೆಗುರುಳಿದ ಮರ

ಕಾರವಾರ, ಭಟ್ಕಳ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೊನ್ನಾವರ ತಾಲೂಕಿನ ಕತ್ತಲೆಕಾನಿನ ಬಳಿಐ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಭಾರಿ ಮಳೆಗೆ ಬೃಹತ್‌ ಮರವೊಂದು ಧರೆಗುರುಳಿದೆ. ಮರ ಬಿದ್ದ ಹಿನ್ನೆಲೆ 4 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಸ್ಥಳೀಯ ಆಡಳಿತ ಆಗಮಿಸಿ, ಜೆಸಿಬಿ ಮೂಲಕ ಮರ ತೆರವು ಮಾಡಿ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.

ಇದನ್ನೂ ಓದಿ: ಹಾಳಾಗಿ ನಿಂತಿದ್ದ ಟ್ರ್ಯಾಕ್ಟರ್​ಗೆ 2 ಕಾರುಗಳು ಡಿಕ್ಕಿ, ಮೂವರ ಸಾವು; ರೈಲಿಗೆ ಸಿಲುಕಿ ಯುವಕ ದುರ್ಮರಣ

ಭಾರಿ ಮಳೆಗೆ ಧರೆಗುರುಳಿದ ಮರ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಕಲಬುರಗಿ: 30 ಡಿ.ಸೆ – 23 ಡಿ.ಸೆ
ಗದಗ: 28ಡಿ.ಸೆ – 21 ಡಿ.ಸೆ
ಚಿತ್ರದುರ್ಗ: 27 ಡಿ.ಸೆ – 21 ಡಿ.ಸೆ
ಬೆಳಗಾವಿ: 25 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 25 ಡಿ.ಸೆ
ಮಂಗಳೂರು: 30 ಡಿ.ಸೆ – 26 ಡಿ.ಸೆ
ಹೊನ್ನಾವರ: 30 ಡಿ.ಸೆ- 26 ಡಿ.ಸೆ
ಬೆಂಗಳೂರು ನಗರ: 28 ಡಿ.ಸೆ – 21 ಡಿ.ಸೆ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version