ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು (weather report) ದುರ್ಬಲವಾಗಿದ್ದು, ರಾಜ್ಯಾದ್ಯಂತ ಜು.31ರಂದು ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಬಹುತೇಕ ಸ್ಥಳದಲ್ಲಿ ಸಾಧಾರಣ ಮಳೆಯಾಗಲಿದೆ.
ಉತ್ತರ ಒಳನಾಡಿನ ಜಿಲ್ಲೆಯಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಕೆಲವು ಸ್ಥಳದಲ್ಲಿ ತುಂತುರ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಯಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಹಾಸನ , ಕೊಡಗು ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.
ಈ ಜಿಲ್ಲೆಗಿಲ್ಲ ಮಳೆ ಮುನ್ಸೂಚನೆ
ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯಾವುದೇ ಮಳೆ ಮುನ್ಸೂಚನೆಯನ್ನು ನೀಡಿಲ್ಲ. ಬದಲಿಗೆ ಈ ನಾಲ್ಕು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.
ಮೀನುಗಾರರಿಗೆ ಮುಂದುವರಿದ ಅಲರ್ಟ್
ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-55 ಕಿ.ಮೀ ವೇಗದಲ್ಲಿ ಬೀಸಲಿ ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ಬೆಂಗಳೂರು ನಗರದ ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ವಾತಾವರಣವೂ ಬಿಸಿಲಿನಿಂದ ಕೂಡಿದ್ದರೆ, ಸಂಜೆ ವೇಳೆಗೆ ಜಿಟಿ ಜಿಟಿ ಮಳೆಯಾಗಲಿದೆ. ಆದರೆ ಕೆಲವೊಮ್ಮೆ ಮೇಲ್ಮೈಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Monsoon Boots Fashion: ಮಾನ್ಸೂನ್ ಸೀಸನ್ ವೆಸ್ಟರ್ನ್ ಔಟ್‌ಫಿಟ್ಸ್ ಜೊತೆಯಾದ ಬೂಟ್ಸ್ ಫ್ಯಾಷನ್
ರಾಜ್ಯದಲ್ಲಿ ಶನಿವಾರ ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮಂಕಿ (ಉತ್ತರ ಕನ್ನಡ ಜಿಲ್ಲೆ) 4; ಮಾಣಿ, ಪುತ್ತೂರು, ಧರ್ಮಸ್ಥಳ (ಎಲ್ಲಾ ದಕ್ಷಿಣ ಕನ್ನಡ ಜಿಲ್ಲೆ), ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ) ತಲಾ 3 ಸೆಂ.ಮೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಸಿದ್ದಾಪುರ, ಕೊಲ್ಲೂರು ಹಾಗೂ ಉತ್ತರ ಕನ್ನಡದ ಗೇರುಸೊಪ್ಪಾ, ಅಂಕೋಲಾ, ಶಿರಾಲಿ, ಮಂಗಳೂರು ವಿಮಾನ ನಿಲ್ದಾಣ, ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ), ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ) ತಲಾ 2 ಸೆಂ.ಮೀ ಮಳೆಯಾಗಿದೆ.
ಉಪ್ಪಿನಂಗಡಿ, ಪಣಂಬೂರು, ಸುಳ್ಯ, ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಜೋಯಿಡಾ, ಕದ್ರಾ, ಕಾರವಾರ, ಗೋಕರ್ಣ, ಜಗಲಬೆಟ್, ಮಂಚಿಕೆರೆ, ಸಿದ್ದಾಪುರ, ಹೊನ್ನಾವರ, ಕುಮಟಾ (ಉತ್ತರ ಕನ್ನಡ ಜಿಲ್ಲೆ), ಕೋಟ, ಕಾರ್ಕಳ (ಎರಡೂ ಉಡುಪಿ ಜಿಲ್ಲೆ), ಚಿತ್ತಾಪುರ, ಆಳಂದ (ಎರಡೂ ಕಲಬುರ್ಗಿ ಜಿಲ್ಲೆ), ಲೋಂಡಾ (ಬೆಳಗಾವಿ ಜಿಲ್ಲೆ), ಶಹಪುರ (ಯಾದಗಿರಿ ಜಿಲ್ಲೆ), ತಾಳಗುಪ್ಪ (ಶಿವಮೊಗ್ಗ ಜಿಲ್ಲೆ), ಭಾಗಮಂಡಲ (ಕೊಡಗು ಜಿಲ್ಲೆ), ಜಯಪುರ, ಬಾಳೆಹೊನ್ನೂರು, ಕೊಪ್ಪ, ಕಮ್ಮರಡಿ (ಎಲ್ಲ ಚಿಕ್ಕಮಗಳೂರು ಜಿಲ್ಲೆ) ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ