ಬೆಂಗಳೂರು: ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಳೆ ನೀರಿಗೆ (Bangalore Rain) ಯುವತಿ, ಇನ್ಫೋಸಿಸ್ ಉದ್ಯೋಗಿ ಮೃತಪಟ್ಟ ಪ್ರಕರಣ ಸಂಬಂಧ ಕಾರು ಚಾಲಕನ ಮೇಲೆ 304a ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಆತನನ್ನು ಬಂಧನ ಮಾಡಿದ್ದಾರೆ. ಬಳಿಕ ವಿಶೇಷ ಜಾಮೀನಿನ ಮೂಲಕ ಬಿಡುಗಡೆ ಮಾಡಿದ್ದಾರೆ. ಈ ನಡುವೆ ಕಾರು ಚಾಲಕ ಹರೀಶ್, “ತನ್ನದೇನೂ ತಪ್ಪಿಲ್ಲ, ನಾನು ಹೇಳಿದರೂ ಕೇಳದೆ ಕಾರಿನ ಗ್ಲಾಸ್ ಏರಿಸಿಕೊಂಡಿದ್ದಾರೆ. ತಪ್ಪೆಲ್ಲ ಭಾನುರೇಖಾ ಕುಟುಂಬಸ್ಥರದ್ದೇ ಎಂದು ಹೇಳಿಕೆ ನೀಡಿದ್ದರೆ, ಇತ್ತ ಭಾನುರೇಖಾ ಕುಟುಂಬದವರು, “ಕೆಳಗೆ ಇಳಿಯಲು ಕಾರು ಚಾಲಕನೇ ಬೇಡ” ಎಂದು ಹೇಳಿದ್ದ ಎಂಬುದಾಗಿ ಆರೋಪ ಮಾಡಿದ್ದಾರೆ.
ಆರೋಪಿ ಕಾರು ಚಾಲಕನ ವಿಚಾರಣೆ
ಪ್ರಕರಣ ಸಂಬಂಧ ಕಾರು ಚಾಲಕ ಹರೀಶ್ ಮೇಲೆ ಆರೋಪ ಕೇಳಿ ಬಂದಿದ್ದರಿಂದ ಹಲಸೂರು ಗೇಟ್ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹರೀಶ್ ಮೇಲೆ ಬೇಜವಾಬ್ದಾರಿತನದಿಂದ ಕಾರು ಚಲಾಯಿಸಿರುವ ಆರೋಪವನ್ನು ಮಾಡಲಾಗಿದೆ.
ಕುಟುಂಬದವರ ಆರೋಪ ಏನು?
ನೀರು ನಿಂತಿದ್ದರೂ ಅಂಡರ್ ಪಾಸ್‌ನಲ್ಲಿ ಕಾರನ್ನು ಚಲಾಯಿಸಿದ್ದಾನೆ. ಅಂಡರ್‌ಪಾಸ್‌ಗೆ ಹೋಗುತ್ತಿದ್ದಂತೆ ಕಾರು ಆಫ್ ಆಗಿದೆ. ಈ ವೇಳೆ ಕಾರಿನಿಂದ ಇಳಿಯಲು ಯತ್ನಿಸಿದಾಗ ಚಾಲಕ ಬೇಡ ಎಂದು ಹೇಳಿದ್ದ. ತಾನು ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಆದರೆ, ಸಾಧ್ಯವಾಗಲೇ ಇಲ್ಲ. ಇನ್ನು ಬಿಬಿಎಂಪಿ ಬೆಜವಾಬ್ದಾರಿಗೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದೆ. ಹೀಗಾಗಿ ಭಾನುರೇಖಾ ಸಾವಿಗೆ ಚಾಲಕ ಹರೀಶ್, ಬಿಬಿಎಂಪಿ ಕಾರಣ ಎಂದು ಮೃತಳ ಸಹೋದರ ಸಂದೀಪ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು.
ದೂರಿನಲ್ಲಿ ಏನಿದೆ?
ಭಾನುರೇಖಾ, ಅಜ್ಜಿ ಸಾಮ್ರಾಜ್, ತಾಯಿ ಸ್ವರೂಪ, ಸಂಬಂಧಿಗಳಾದ ಸೋಹಿತಾ, ಸವಿತಾ ಸೇರಿ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿದ್ದೆವು. ಬೆಳಗ್ಗೆ 8 ಗಂಟೆಗೆ ಮಹೇಂದ್ರ ಜೈಲೋ ಕಾರನ್ನು ಒಂದು ದಿನಕ್ಕೆ ಬುಕ್ ಮಾಡಲಾಗಿತ್ತು. ಮಧ್ಯಾಹ್ನ 3.45ಕ್ಕೆ ಕಬ್ಬನ್ ಪಾರ್ಕ್ ನೋಡಿಕೊಂಡು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮನೆ ಕಡೆಗೆ ಹೊರಡಲಾಗಿತ್ತು. ಕಾರಿನ ಹಿಂಭಾಗದ ಸೀಟಿನಲ್ಲಿ ಭಾನುರೇಖಾ ಕುಳಿತಿದ್ದಳು. ಕಾರು ಅಂಡರ್ ಪಾಸ್‌ಗೆ ಹೋಗುತ್ತಾ ಇದ್ದಂತೆ ಆಫ್ ಆಗಿದೆ. ಸ್ಟಾರ್ಟ್ ಮಾಡಲು ಪ್ರಯತ್ನ ಮಾಡಿದರೂ ಸ್ಟಾರ್ಟ್ ಆಗಲಿಲ್ಲ. ಈ ವೇಳೆ ಕೂಗಾಡುತ್ತಾ ಡೋರ್ ಓಪನ್ ಮಾಡಲು ಯತ್ನಿಸಲಾಯಿತು. ಆದರೆ, ದುರಾದೃಷ್ಟವಶಾತ್ ಡೋರ್ ಕೂಡ ಓಪನ್ ಆಗಲಿಲ್ಲ. ಆಗ ಕಾಲಿನಿಂದ ಕಾರು ಗ್ಲಾಸ್ ಒಡೆದು ಹೊರಗಡೆ ಬಂದು ಸಾರ್ವಜನಿಕರಿಗೆ ರಕ್ಷಣೆ ಮಾಡುವಂತೆ ಕೂಗಲಾಗಿದೆ. ಈ ವೇಳೆ ಭಯಗೊಂಡು ಭಾನುರೇಖಾ ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದಳು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ರಕ್ಷಣೆ ಆಯಿತು. ತಕ್ಷಣವೇ ಆಟೋದಲ್ಲಿ ಭಾನುರೇಖಾಳನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬಂದಿದ್ದೇ ವೈದ್ಯರು ನೋಡಿದಾಗ ಭಾನುರೇಖಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆಗೆ ಬಿಬಿಎಂಪಿ ಹಾಗೂ ಕಾರು ಚಾಲಕ ನೇರ ಕಾರಣ ಎಂದು ದೂರು ನೀಡಲಾಗಿದೆ.
ಇದನ್ನೂ ಓದಿ: Siddaramaiah: ಬಿಜೆಪಿ ನೇಮಿಸಿದ ನಿಗಮಾಧ್ಯಕ್ಷರು ಔಟ್; ಕಾಮಗಾರಿಗಳ ಪೇಮೆಂಟ್ ಸ್ಟಾಪ್: ಸಿಎಂ ಸಿದ್ದರಾಮಯ್ಯ ಸೂಚನೆ
ಕಾರು ಚಾಲಕನ ಹೇಳಿಕೆ ಏನು?
ಕಾರು ಚಾಲಕ ಹರೀಶ್ ಪೊಲೀಸ್ ವಿಚಾರಣೆ ವೇಳೆ ಹಲವು ಸಂಗತಿಗಳನ್ನು ಹೇಳಿಕೊಂಡಿದ್ದಾನೆ. ಭಾನುರೇಖಾ ಅವರನ್ನು ಬದುಕಿಸುವುದಕ್ಕೆ ನಾನು ತುಂಬಾ ಪ್ರಯತ್ನ ಮಾಡಿದೆ, ಆದರೆ ಆಗಲಿಲ್ಲ. ಅಲ್ಲದೆ, ಅಂಡರ್‌ಪಾಸ್‌ನಲ್ಲಿ ಸಡನ್ ಆಗಿ ಕಾರು ಆಫ್ ಆಯ್ತು, ಎಷ್ಟೇ ಪ್ರಯತ್ನಪಟ್ಟರೂ ಸ್ಟಾರ್ಟ್ ಆಗಲಿಲ್ಲ. ಆಗ ಡೋರ್ ತೆಗೆಯುವುದಕ್ಕೆ ಪ್ರಯತ್ನ ಮಾಡಿದೆ, ಅದೂ ಆಗಲಿಲ್ಲ. ಕೊನೆಗೆ ಕಾರಿನ ಗ್ಲಾಸ್ ಒಡೆದೆ. ಈ ವೇಳೆ ನನ್ನ ಕೈಗೂ ಪೆಟ್ಟಾಗಿದೆ. ನೀರು ಕಾರಿನ ತುಂಬ ತುಂಬಿದ್ದ ಕಾರಣಕ್ಕೆ ದಿಢೀರಾಗಿ ರಕ್ಷಣೆ ಮಾಡಲು ಆಗಲಿಲ್ಲ. ಆದರೂ ಗ್ಲಾಸ್ ಒಡೆದ ಬಳಿಕ ಮುಂದೆ ಇದ್ದವರನ್ನು ಹೊರಗೆ ಕಳುಹಿಸಲಾಯ್ತು. ಭಾನುರೇಖಾ ಹಿಂದೆ ಇದ್ದರು. ಹಿಂದಿನ ಸೀಟಿನ ಬಳಿ ತುಂಬಾ ನೀರು ಸೇರಿಕೊಂಡಿತ್ತು. ಈ ವೇಳೆಗೆ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ನಂತರ ಎಲ್ಲರೂ ಬಂದು ರಕ್ಷಣೆ ಮಾಡಿದರು. ಆದರೂ ಯುವತಿ ಅಷ್ಟು ಹೊತ್ತಿಗೆ ಮೃತಪಟ್ಟಿದ್ದರು. ಕಾರಿನೊಳಗೆ ನೀರು ಬಂದಾಗ ಒಳಗಿದ್ದವರು ಹಾಗೇ ಇಳಿದು ಹೋಗಬಹುದು ಅನಿಸುತ್ತದೆ ಎಂದು ಹೇಳಿದರು. ಹೀಗಾಗಿ ನಾನು ಹೀಗೆ ಮಾಡಬೇಕಾಯ್ತು ಎಂದು ಹರೀಶ್ ಹೇಳಿಕೆ ನೀಡಿದ್ದಾನೆ.
ಆದರೆ, ಒಟ್ಟಾರೆಯಾಗಿ ಯಾರದ್ದು ನಿಜವಾಗಿಯೂ ತಪ್ಪಾಗಿದೆ ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಎರಡೂ ಕಡೆಯ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.