Site icon Vistara News

ಕುಮಟಾದಲ್ಲಿ ಅಪರೂಪದ ಬಿಳಿ ಹೆಬ್ಬಾವು ಪ್ರತ್ಯಕ್ಷ: ಸುರಕ್ಷಿತ ಜಾಗಕ್ಕೆ ಸ್ಥಳಾಂತರ

ಬಿಳಿ ಹೆಬ್ಬಾವು

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್‌ನ ರಾಮನಗರ ಮನೆಯೊಂದರಲ್ಲಿ ಬಿಳಿ ಹಾವು ಪ್ರತ್ಯಕ್ಷವಾಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರೊಬ್ಬರು ಹಾವನ್ನು ಹಿಡಿದು ಸುರಕ್ಷಿತ ಜಾಗದಲ್ಲಿ ಬಿಟ್ಟಿದ್ದಾರೆ.

ಮಿರ್ಜಾನ್‌ನ ರಾಮನಗರದ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಎಂಬುವವರ ಮನೆಯಲ್ಲಿ ಈ ಬಿಳಿ ಹಾವು ಪ್ರತ್ಯಕ್ಷವಾಗಿತ್ತು. ಈ ವಿಷಯ ತಿಳಿದ ಉರಗಪ್ರೇಮಿ ಪವನ್ ಎಮ್ ನಾಯ್ಕ ಸ್ಥಳಕ್ಕೆ ಆಗಮಿಸಿ ಈ ಅಪರೂಪದ ಬಿಳಿ ಹಾವನ್ನು ಹಿಡಿದಿದ್ದಾರೆ. ಇದು ಯಾವುದೇ ವಿಷಕಾರಿ ಹಾವಲ್ಲ, ಬದಲಿಗೆ ಹೆಬ್ಬಾವು ಎಂದು ಖಾತ್ರಿಪಡಿಸುವುದರೊಂದಿಗೆ ಸ್ಥಳೀಯರಲ್ಲಿ ಮೂಡಿದ್ದ ಆತಂಕ ದೂರಮಾಡಿದರು.

ಹಾವಿಗೆ ಬಿಳಿ ಚರ್ಮ ಹೇಗೆ ಬಂತು?: ಇಂತಹ ಬಿಳಿ ಹಾವುಗಳು ಬೇರೆಯ ಜಾತಿಯ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ನ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನ ಅಲ್ಬಿನೋ ಸ್ನೇಕ್ಸ್ ಎಂದು ಕೂಡ ಕರೆಯುತ್ತಾರೆ.

ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕಾಗುತ್ತದೆ‌. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರುವ ಕಾರಣ ಇದನ್ನು ಅಲ್ಬಿನೋ ಹಾವಿನ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ಆದರೂ ಇದು ಕರ್ನಾಟಕದಲ್ಲಿ ಸಿಕ್ಕಿರುವುದು 2ನೇ ದಾಖಲೆಯಾಗಿದ್ದು, ಸದ್ಯ ಹಾವನ್ನು ಸುರಕ್ಷಿತ ಜಾಗಕ್ಕೆ ಬಿಡಲಾಗಿದೆ ಎಂದು ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Honey trap | ಕ್ರೈಂ ಪೊಲೀಸರೆಂದು ₹ 14 ಲಕ್ಷ ಸುಲಿಗೆ ಮಾಡಿದ ದುಷ್ಕರ್ಮಿಗಳು

Exit mobile version