ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ಚಿರತೆ ದಾಳಿಗೆ ನಾಲ್ಕು ಮೇಕೆಗಳು (Wild Animals Attack) ಬಲಿಯಾಗಿವೆ. ರೈತ ನಾರಾಯಣಪ್ಪ ಎಂಬುವವರಿಗೆ ಸೇರಿದ ನಾಲ್ಕು ಮೇಕೆಗಳನ್ನು ಮನೆಯ ಹಿತ್ತಲಿನಲ್ಲಿ ಕಟ್ಟಿಹಾಕಲಾಗಿತ್ತು. ತಡರಾತ್ರಿ ಗ್ರಾಮದೊಳಗೆ ಬಂದ ಚಿರತೆಯೊಂದು ಮೇಕೆಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಇತ್ತೀಚೆಗಷ್ಟೇ ಕೋಳೂರು ಗ್ರಾಮದ ಕೆರೆ ಬಳಿ ಮಣ್ಣು ತೆಗೆಯುವಾಗ ಮೂರು ಚಿರತೆಗಳು ಓಡಾಟ ನಡೆಸಿರುವುದು ಜೆಸಿಬಿ ಚಾಲಕರಿಗೆ ಕಂಡು ಬಂದಿತ್ತು. ಚಿರತೆಗಳ ಚಲನವಲನಗಳನ್ನು ಚಾಲಕ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್ ಅಳವಡಿಕೆ ಮಾಡಿದ್ದರು. ಆದರೆ ಬೋನಿಗೆ ಬೀಳದ ಚಾಲಾಕಿ ಚಿರತೆ ತಡರಾತ್ರಿ ಹಿತ್ತಲಿಗೆ ನುಗ್ಗಿ ಮೇಕೆಗಳ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿ ಸುದ್ದಿ ಕೇಳಿ ಗ್ರಾಮಸ್ಥರು ಭಯಭೀತರಾಗಿದ್ದು, ಹೊಲಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: Child Death: ಆಟವಾಡುತ್ತಾ ಹೋದ ಆರು ವರ್ಷದ ಬಾಲಕಿ ಲಿಫ್ಟ್‌ಗಾಗಿ ತೋಡಿದ್ದ ಗುಂಡಿಗೆ ಬಿದ್ದು ಸಾವು
ತಮಿಳುನಾಡು ಗಡಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ
ಆನೇಕಲ್ ಸಮೀಪದ ತಮಿಳುನಾಡು ಗಡಿಯ ಡೆಂಕಣಿಕೋಟೆ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಶಾಣಮಾವು ಅರಣ್ಯದಿಂದ ಆಹಾರ ಅರಸಿ ನಾಡಿನತ್ತ ಒಂಟಿ ಸಲಗವೊಂದು ಬಂದಿದ್ದು, ಹಳ್ಳಿ ವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ರೈತರ ಹೊಲ, ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದು, ಗ್ರಾಮಸ್ಥರು ಪಟಾಕಿ ಸಿಡಿಸಿ ಕಾಡಿನತ್ತ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ದೇವಸ್ಥಾನದಲ್ಲಿ ಕರಡಿ ಪ್ರತ್ಯಕ್ಷ
ತುಮಕೂರಿನ ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಾಚನಹಳ್ಳಿಯಲ್ಲಿ ಒಡೆಬೈರವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಶನಿವಾರ ಬೆಳಗಿನ ಜಾವ ಕರಡಿ ಪ್ರತ್ಯಕ್ಷವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕರಡಿ ಪ್ರತ್ಯಕ್ಷದ ಸುದ್ದಿ ಕೇಳಿ ಸ್ಥಳೀಯರಲ್ಲಿ ಆತಂಕ ಹೆಚ್ಚಿದ್ದು, ಕೂಡಲೇ ಕರಡಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಮರವೇರಿ ಕುಳಿತಿದ್ದ ಕರಡಿಯ ರಕ್ಷಣೆ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ಜನರ ಕೂಗಾಟಕ್ಕೆ ಭೀತಿಗೊಂಡ ಕರಡಿಯೊಂದು ಮರವೇರಿ ಕುಳಿತಿತ್ತು. ಕರಡಿಯನ್ನು ಮರದಿಂದ ಕೆಳಗಿಳಿಸಲು ಅರಣ್ಯ ಸಿಬ್ಬಂದಿ ಎಲ್ಲ ಪ್ರಯತ್ನ ನಡೆಸಿದರು. ಜನರನ್ನು ಕರಡಿಯ ಬಳಿ ಬಿಡದಂತೆ ಕಮಲಾಪುರ ಪೊಲೀಸರು ತಡೆದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಕರಡಿಯನ್ನು ಕೆಳಗಿಳಿಸಿದರು.
ಕ್ರೀಡಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ