ವಿಜಯನಗರ/ಕಲಬುರಗಿ/ಆನೇಕಲ್: ಮತ್ತೆ ಹಲವೆಡೆ ಕಾಡು ಪ್ರಾಣಿಗಳು (Wild animals Attack) ನಗರ ಪ್ರದೇಶದಲ್ಲಿ ಪ್ರತ್ಯಕ್ಷವಾಗಿವೆ. ವಿಜಯನಗರದಲ್ಲಿ ಕರಡಿ, ಕಲಬುರಗಿಯಲ್ಲಿ ಚಿರತೆ, ಆನೇಕಲ್‌ನಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಇದರಿಂದಾಗಿ ಜನರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರಮುಖ ರಸ್ತೆಯಲ್ಲೇ ಕರಡಿಯೊಂದು ಪ್ರತ್ಯಕ್ಷವಾಗಿದೆ. ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟಿ ಓಡಿ ಹೋಗಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿರುವವರು ತಮ್ಮ ಮೊಬೈಲ್‌ನಲ್ಲಿ ಕರಡಿ ಓಡಾಟದ ವಿಡಿಯೊ ಮಾಡಿದ್ದಾರೆ.
ಕರಡಿ ಪ್ರತ್ಯಕ್ಷವಾದ ಹಿನ್ನೆಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬೀಟ್‌ನಲ್ಲಿದ್ದ ಪೊಲೀಸರು ಕೂಡಲೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಅಧಿಕಾರಿಗಳು ಬರುವಷ್ಟರಲ್ಲಿ ಕರಡಿ ಪಟ್ಟಣ ಬಿಟ್ಟು ಹೊರಹೋಗಿದೆ.
ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಜಮೀನಿಗೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿವೆ. ರೈತರು ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಕಾಡಾನೆಗಳ ಉಪಟಳದಿಂದ ಕಾಡಂಚಿನ ಗ್ರಾಮದ ರೈತರು ನಲುಗಿದ್ದಾರೆ.
ರೈತ ಕುಮಾರ್ ಎಂಬವರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿವೆ. ಸಾಲ ಸೋಲ ಮಾಡಿ ಬೆಳೆದಿದ್ದ ಅವರೆಗಿಡ, ಬೀನ್ಸ್, ಮೂಲಂಗಿ ಬೆಳೆಯನ್ನು ತುಳಿದು ಕಾಡಾನೆಗಳು ಹಾನಿ ಮಾಡಿವೆ. ಸಂಜೆ ಕತ್ತಲಾಗುತ್ತಿದ್ದಂತೆ ಹಿಂಡು ಹಿಂಡಾಗಿ ಬಂದು ಬೆಳೆಯನ್ನು ತಿಂದು ಹೋಗುತ್ತಿವೆ. ಕಾಡಾನೆಗಳ ಹಾವಳಿಯಿಂದ ಜೀವ ಭಯದಲ್ಲೇ ಓಡಾಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ರಸ್ತೆ ಬದಿಯಲ್ಲಿ ಚಿರತೆ ಓಡಾಟ
ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಯಾದಗಿರಿಯಿಂದ ದಂಡಗುಂಡಕ್ಕೆ ಬರುವಾಗ ಯಾಗಾಪೂರ ಗುಡ್ಡದಲ್ಲಿ ರಸ್ತೆ ಬದಿ ಚಿರತೆ ಕಾಣಿಸಿಕೊಂಡಿದೆ. ವಿದ್ಯಾನಂದ ಹಿರೇಮಠ ಎಂಬುವವರು ಕಾರಿನಲ್ಲಿ ತಮ್ಮ ಕುಟುಂಬದ ಜತೆ ತೆರಳುತ್ತಿದ್ದಾಗ ಚಿರತೆ ಕಂಡಿದೆ. ಚಿರತೆ ಕಂಡ ವಿದ್ಯಾನಂದ ಅವರ ಕುಟುಂಬದವರು ಗಾಬರಿ ಆಗಿದ್ದಾರೆ. ಕಾರಿನ ಹೆಡ್ ಲೈಟ್ ಬೆಳಕಲ್ಲಿ ಚಿರತೆಯ ವಿಡಿಯೋ ಸೆರೆ ಹಿಡಿದಿದ್ದಾರೆ.
ಇತ್ತ ಚಿರತೆ ಪ್ರತ್ಯಕ್ಷದ ಸುದ್ದಿ ತಿಳಿದು ಗ್ರಾಮಸ್ಥರು ಭೀತಿಗೊಂಡಿದ್ದಾರೆ. ನಾಳೆಯಿಂದ ಪ್ರಸಿದ್ದ ದಂಡಗುಂಡ ಬಸವೇಶ್ವರ ಜಾತ್ರೆ ನಡೆಯಲಿದೆ. ಪಾದಯಾತ್ರೆ ಮೂಲಕ ಜಾತ್ರೆಗೆ ಭಕ್ತ ಸಮೂಹವೇ ಬರಲಿದೆ. ಜಾತ್ರೆಗೆ ಬರುವ ಭಕ್ತರಲ್ಲಿ ಚಿರತೆಯು ಆತಂಕ ಸೃಷ್ಟಿಸಿದೆ. ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ