| ಪ್ರತಾಪ್ ಹಿರೀಸಾವೆ, ಹಾಸನ
ಸಕಲೇಶಪುರ: ತಾಲೂಕಿನಲ್ಲಿ ಏಕಾಂಗಿಯಾಗಿ ಓಡಾಡುತ್ತಾ ಸಿಕ್ಕ ಸಿಕ್ಕವರ ಮನೆಮೇಲೆ ದಾಳಿ ಮಾಡುತ್ತಾ, ಮನೆ ಕಿಟಕಿ ಬಾಗಿಲು ಮುರಿದು, ಸಿಕ್ಕಿದ್ದು ತಿಂದು ಜೀವ ಭಯ ಸೃಷ್ಟಿಸಿದ್ದ ಅಂದಾಜು 25 ವರ್ಷದ ಒಂಟಿ ಆನೆಯನ್ನು ಕಡೆಗೂ ಅರಣ್ಯ ಇಲಾಖೆ ಸೆರೆಹಿಡಿದಿದೆ.
ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದ ಸಮೀಪ ಉದೇವಾರ ಎಸ್ಟೇಟ್‌ನಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿ ರೌಡಿ ಆನೆ ಮಕ್ನಾಗೆ ಅರಿವಳಿಕೆ ಮದ್ದು ನೀಡಿ ಸೆರೆಹಿಡಿಯಲಾಗಿದೆ. ಮಂಗಳವಾರ ರಾತ್ರಿ ಕೂಡ ಇಲ್ಲಿನ ಸಮೀಪದ ಕೆಸಗುಲಿ ಗ್ರಾಮದ ಮನೆಯೊಂದರ ಮೇಲೆ ಈ ಪುಂಡಾನೆ ದಾಳಿಮಾಡಿ ಮನೆಯ ಬಾಗಿಲು ಮುರಿದು ಆತಂಕ ಸೃಷ್ಟಿಮಾಡಿತ್ತು. ಹಾಗಾಗಿ ಆರು ಸಾಕಾನೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪುಂಡಾನೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ ಲಾರಿ ಮೂಲಕ ಸ್ಥಳಾಂತರ ಮಾಡಿದ್ದಾರೆ.
ಸಾಮಾನ್ಯವಾಗಿ ಪ್ರತಿಬಾರಿ ಆನೆಯನ್ನು ಸೆರೆಹಿಡಿದಾಗ ಅದನ್ನು ಯಾವುದಾದರೂ ಆನೆ ಶಿಬಿರದಲ್ಲಿಟ್ಟು ಪಳಗಿಸೋದು ಮಾಮೂಲಿಯಾಗಿತ್ತು. ಆದರೆ ಈ ಬಾರಿ ಸೆರೆಹಿಡಿದ ಆನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಆನೆಯನ್ನು ಬೇರೆ ಪ್ರದೇಶದ ದಟ್ಟಾರಣ್ಯಕ್ಕೆ ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ತೀರ್ಮಾನಿಸಿದ್ದು, ಗುರುವಾರ ಅರಣ್ಯಕ್ಕೆ ಕಾಡಾನೆ ಸ್ಥಳಾಂತರವಾಗಲಿದೆ. ಕಾಡಾನೆ ಸೆರೆಯಿಂದ ಸದ್ಯ ಜನರು ಕೊಂಚ ನಿರಾಳರಾಗಿದ್ದಾರೆ.
ಹಾಸನ ಜಿಲ್ಲೆಯ ಆಲೂರು ಸಕಲೇಶಪುರ ಭಾಗದಲ್ಲಿ ಕಡಿಮೆ ಎಂದರೂ 60 ಆನೆಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ. ಸಾಮಾನ್ಯವಾಗಿ ಗುಂಪಿನಲ್ಲಿರುವ ಆನೆಗಳು ಪ್ರಾಣ ಹಾನಿ ಮಾಡುವುದಿಲ್ಲ. ಆದರೆ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತವೆ, ಹಾಗಾಗಿಯೇ ಹೀಗೆ ಗುಂಪಿನಲ್ಲಿರುವ ಆನೆ ಹಿಂಡಿನ ನಾಯಕಿ ದೊಡ್ಡ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿದರೆ ಆನೆಗಳ ಚಲನವಲನ ಗೊತ್ತಾಗುತ್ತದೆ. ಆಗ ಆನೆಗಳು ನಾಡಿನತ್ತ ಬರದಂತೆ ಹಾಗೂ ಬೆಳೆ ಹಾನಿಮಾಡದಂತೆ ಆರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ತಂಡದ ಮೂಲಕ ಮ್ಯಾನೇಜ್ ಮಾಡಬಹುದು ಎನ್ನುವುದು ಅಧಿಕಾರಿಗಳ ನಂಬಿಕೆಯಾಗಿದೆ.
ಇದನ್ನೂ ಓದಿ | 4 ಸಾವಿರ ಕಿ.ಮೀ ಕ್ರಮಿಸಿ ಮತ್ತೆ ಹುಟ್ಟೂರು ದುಬಾರೆಯಲ್ಲಿ ಆನೆ ಕುಶ ಪ್ರತ್ಯಕ್ಷ!
ಆದರೆ ಒಂಟಿಯಾಗಿ ಓಡಾಡುವ ಆನೆಗಳು ಜನರಿಗೆ ತೊಂದರೆ ಮಾಡುವುದರ ಜತೆಗೆ ಅಪಾರ ಪ್ರಮಾಣದ ಬೆಳೆಹಾನಿ ಮಾಡುತ್ತವೆ, ಮನೆಗಳ ಬಳಿ ಬಂದು ಆಸ್ತಿಪಾಸ್ತಿ ನಾಶಮಾಡುವು ನಡೆಯುತ್ತಿತ್ತು, ಹಾಗಾಗಿಯೇ ಬುಧವಾರದಿಂದ ಕಾಡಾನೆಗಳ ಸೆರೆ ಹಾಗೂ ರೇಡಿಯೋ ಕಾಲರ್ ಅವಳಡಿಕೆಗೆ ಆಪರೇಷನ್ ಶುರುವಾಗಿದೆ. ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರಿಂಗ್ ಮತ್ತು ಎರಡು ಗಂಡಾನೆಗಳ ಸೆರೆಗೆ ಅನುಮತಿ ಪಡೆದುಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಶುರುಮಾಡಿದ್ದಾರೆ. ದುಬಾರೆ ಸಾಕಾನೆ ಶಿಬಿರದ 3 ಹಾಗೂ ಮತ್ತಿಗೋಡು ಶಿಬಿರದ 3 ಆನೆಗಳ ಸಹಕಾರದಿಂದ ಅರಣ್ಯ ಇಲಾಖೆಯ 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಂದು ಆನೆಯನ್ನು ಸೆರೆಹಿಡಿದು ಸ್ಥಳಾಂತರ ಮಾಡಿದ್ದಾರೆ.
ಗುರುವಾರ ಒಂದು ಹೆಣ್ಣಾನೆಗೆ ರೇಡಿಯೋ ಕಾಲರಿಂಗ್ ಅಳವಡಿಕೆ ಕಾರ್ಯ ನಡೆಯಲಿದ್ದು, ನಂತರ ಮತ್ತೊಂದು ಆನೆ ಸೆರೆಹಿಡಿದು ಸ್ಥಳಾಂತರ ಮಾಡಲಿದ್ದಾರೆ. ಅರಣ್ಯ ಇಲಾಖೆಯೇನೋ ಜನರಿಗೆ ತೀರಾ ಸಮಸ್ಯೆ ಆದಾಗ ಒಂದೊ ಎರಡೋ ಆನೆಯನ್ನು ಸೆರೆಹಿಡಿದು ಸಮಸ್ಯೆ ಬಗೆಹರಿಯಿತು ಎನ್ನುವ ಮಾತನಾಡುತ್ತದೆ. ಆದರೆ ಈ ಭಾಗದಲ್ಲಿ 40 ರಿಂದ 50 ಆನೆಗಳು ರಾಜಾರೋಷವಾಗಿ ಓಡಾಡುತ್ತಿವೆ, ನಮ್ಮ ಭಾಗದಲ್ಲಿಯೇ 20 ಆನೆಗಳು ಬೀಡುಬಿಟ್ಟಿದ್ದು ಜನರು ನಿತ್ಯ ಜೀವ ಭಯದಲ್ಲಿ ಬದುಕುವಂತಾಗಿದೆ ಹಾಗಾಗಿ ಎಲ್ಲಾ ಆನೆಗಳನ್ನು ಸೆರೆಹಿಡಿಯಬೇಕು ಎಂಬುವುದು ಜನರ ಆಗ್ರಹವಾಗಿದೆ.
ಒಟ್ಟಿನಲ್ಲಿ ನಿತ್ಯ ಮನೆಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದ ಈ ಪುಂಡಾನೆ ಸೆರೆ ಸದ್ಯಕ್ಕೆ ಈ ಭಾಗದ ಜನರಲ್ಲಿ ಕೊಂಚ ನೆಮ್ಮದಿ ತರಿಸಿದ್ದರೂ, ಈ ಆನೆಯ ಜಾಗಕ್ಕೆ ಮತ್ತೆ ಯಾವ ಪುಂಡಾನೆ ಬಂದು ವಕ್ಕರಿಸುವುದೋ ಎಂಬುವ ಭೀತಿಯಂತೂ ಜನರಲ್ಲಿ ಇದ್ದೇ ಇದೆ. ಆನೆ ಮಾನವ ಸಂಘರ್ಷ ತಡೆಗೆ ಸರ್ಕಾರ ಶಾಶ್ವತ ಪರಿಹಾರ ಹುಡುಕದ ಹೊರತು ಇಂತಹ ಸಮಸ್ಯೆಗಳಿಗೆ ಕೊನೆ ಎಂಬುದಿಲ್ಲ.
ಇದನ್ನೂ ಓದಿ | Viral Video| ಮರಿ ಆನೆಗೆ Z Plus Security ನೀಡಿದ ಪೋಷಕ ಆನೆಗಳು!