ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ, ಅಡ್ಡೇರಿಯಲ್ಲಿ ಕಾಡಾನೆಗಳ ಉಪಟಳ (Wild elephant menace) ಹೆಚ್ಚಾಗಿದ್ದು, ಕೊಯ್ಲು ಮಾಡಿ ಹಾಕಿದ್ದ ಭತ್ತ, ಹುಲ್ಲು ಹಾಗೂ ಕೊಳವೆ ಬಾವಿಗೆ ಅಳವಡಿಸಿದ್ದ ಪೈಪ್ ಲೈನ್ ಧ್ವಂಸಗೊಳಿಸಿದೆ.
ಹೊರಬೈಲು, ಮತ್ತಿಕೊಪ್ಪ, ಗಾಮನಗದ್ದೆಯಲ್ಲಿ ಕಳೆದ ಅನೇಕ ದಿನಗಳಿಂದ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಶುಂಠಿ ಏರಿ ಮೇಲೆ ನಿರಂತರವಾಗಿ ಓಡಾಡುವುದರಿಂದ ಶುಂಠಿ ಏರಿ ಒಡೆದು ಬೆಳೆ ಹಾನಿಯಾಗಿದೆ. ಸಣ್ಣ ಸಣ್ಣ ಅಡಕೆ ಗಿಡಗಳನ್ನು ಮುರಿದು ಹಾಕುವುದಲ್ಲದೆ, ಸಣ್ಣ ಮರಗಳಿಗೆ ಮೈ ಉಜ್ಜಿಕೊಳ್ಳುವುದರಿಂದ ಮರಗಳು ಮುರಿದು ನಷ್ಟವಾಗುತ್ತಿದೆ.
ಇದನ್ನೂ ಓದಿ | Chanda Kochhar | 3 ಸಾವಿರ ಕೋಟಿ ರೂ. ವಂಚನೆ, ಚಂದಾ ಕೊಚ್ಚರ್, ಪತಿ ದೀಪಕ್ ಕೊಚ್ಚರ್ 3 ದಿನ ಸಿಬಿಐ ಕಸ್ಟಡಿಗೆ
ಹೊರಬೈಲಿನ ಎಲೆಬಳ್ಳಿ ಮಂಜಪ್ಪ ಹಾಗೂ ಇವರ ಸೋದರರ ಶುಂಠಿ ಹಾಗೂ ಗದ್ದೆಗೆ ಹಾನಿ ಮಾಡಿದೆ. ಗಾಮನಗದ್ದೆಯ ಹರಿಗೆಕೊಪ್ಪದ ನಾರಾಯಣಪ್ಪನವರು ಕೊಯ್ದು ಹಾಕಿದ್ದ ಭತ್ತದ ಗದ್ದೆಗೆ ನುಗ್ಗಿ ಹಾಳು ಮಾಡಿದೆ. ಇವರದ್ದೇ ಪೈಪ್‌ಲೈನ್‌ನ ವಾಲ್‌ಗಳನ್ನು ಮುರಿದು ಹಾಕಿದೆ. ಪ್ರತಿನಿತ್ಯವೂ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಡೈರಿಗೆ ಹಾಲು ಹಾಕುವವರು, ದಿನನಿತ್ಯದ ಕೆಲಸ ಕಾರ್ಯಗಳಿಗೆ ಪಟ್ಟಣಗಳಿಗೆ ಹೋಗಿ ಬರುವವರು, ಶಾಲಾ ಮಕ್ಕಳು ಆತಂಕದಲ್ಲಿಯೇ ಸಂಚರಿಸುವಂತಾಗಿದೆ. ಗದ್ದೆ ಹೊಲಗಳಲ್ಲಿ ಕೆಲಸ ಮಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ಸಿರಿಗೆರೆ ವಲಯ ಅರಣ್ಯಾಧಿಕಾರಿ ಕಚೇರಿ ಸಿಬ್ಬಂದಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಿರಂತರವಾಗಿ ಹಾನಿ ಮಾಡುತ್ತಿರುವ ಆನೆಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ | Coronavirus | ಶುದ್ಧ ತುಳಸಿ ಮಾಲೆ ಧರಿಸಿದರೆ ಯಾವ ಕೊರೊನಾವೂ ಬರುವುದಿಲ್ಲ ಎಂದರು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್