Site icon Vistara News

ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕಾರಣಕ್ಕೆ ಬರಲಿದ್ದಾರ?: ಸಿಂಧನೂರಿನಿಂದ ಸ್ಪರ್ಧಿಸಲು ಸಿದ್ಧತೆ?!

ಸಿಂಧನೂರು: ಬಳ್ಳಾರಿ ಗಣಿ ಧಣಿ ಎಂದೇ ಖ್ಯಾತಿಯಾಗಿ ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ಮೆರೆದ ಗಾಲಿ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ಹೊರಗುಳಿದು ಏಳೆಂಟು ವರ್ಷಗಳೇ ಕಳೆದು ಹೋದವು. ಗಣಿ ಹಗರಣದಲ್ಲಿ ಆರೋಪಿಯಾಗಿ ಜೈಲು ಸೇರಿ, ಅಲ್ಲಿಂದ ಜಾಮೀನು ಪಡೆದು ಹೊರಗೆ ಬಂದ ಮೇಲೆ ಅವರು ಸಕ್ರಿಯ ರಾಜಕಾರಣಕ್ಕೆ ಬಂದೇ ಇಲ್ಲ. ಆದರೆ ಈಗ ಜನಾರ್ದನ ರೆಡ್ಡಿ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುತ್ತಾರಾ? ಹೀಗೊಂದು ಚರ್ಚೆ, ಕುತೂಹಲ ಶುರುವಾಗಿದೆ.

ರಾಯಚೂರಿನ ಸಿಂಧನೂರಿನಲ್ಲಿರುವ ಗಾಂಧಿನಗರದ ಸ್ಪಟಿಕ ಲಿಂಗ ಮಹಾಗಿರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಭಾನುವಾರ ಪಾಲ್ಗೊಂಡಿದ್ದರು. ಅದರ ಬೆನ್ನಲ್ಲೇ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯ ಪ್ರವೇಶದ ಬಗ್ಗೆ ತುಸು ಹೆಚ್ಚು ಎನ್ನಿಸುವಷ್ಟು ಮಾತು ಕೇಳಿಬರುತ್ತಿದೆ. ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಪರ್ಧಿಸುವ ನಿರ್ಧಾರ ಮಾಡಿಲ್ಲ

ಸದ್ಯಕ್ಕೆ ಈ ಸುದ್ದಿಗಳ ಕುರಿತು ಜನಾರ್ದನ ರೆಡ್ಡಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸಿಂಧನೂರು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಮುಂದುವರಿದು, ಟಿಕೆಟ್‌ ನೀಡುವ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಹೈಕಮಾಂಡ್‌ ಯಾರಿಗೇ ಟಿಕೆಟ್‌ ನೀಡಿದರೂ ಅದನ್ನು ನಾನು ಗೌರವಿಸುತ್ತೇನೆ. ನಾನು ಚುನಾವಣಾ ಉದ್ದೇಶದಿಂದ ಪ್ರವಾಸ ಮಾಡುತ್ತಿಲ್ಲ ಎಂದಷ್ಟೆ ಹೇಳಿದ್ದಾರೆ.

ಇದನ್ನೂ ಓದಿ | ನಿರುದ್ಯೋಗಕ್ಕೆ ರಾಜಕಾರಣಿಗಳೇ ಕಾರಣ: ಡಿ.ಕೆ. ಶಿವಕುಮಾರ್‌ ಪ್ರಶ್ನೆಗೆ Twitterನಲ್ಲಿ ಸ್ವಾರಸ್ಯಕರ ಉತ್ತರಗಳು !

ಜನಾರ್ದನ ರೆಡ್ಡಿ ವಿರುದ್ಧ ಇದ್ದಿದ್ದು ಭ್ರಷ್ಟಾಚಾರ ಆರೋಪ. ಜೈಲಿಗೆ ಹೋಗಿಬಂದಾಗಿನಿಂದಲೂ ಹೈಕಮಾಂಡ್‌ ಅವರನ್ನು ಮೂಲೆಗುಂಪು ಮಾಡಿದೆ. ಹಾಗಿದ್ದಾಗ್ಯೂ ಬಿಜೆಪಿ ನಾಯಕ ಶ್ರೀರಾಮುಲು ಅವರಿಗೆ ಜನಾರ್ದನ ರೆಡ್ಡಿ ಆಪ್ತರು. ಜನಾರ್ದನ ರೆಡ್ಡಿ ತಾವು ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರೂ, ಹಿಂದಿನ ಚುನಾವಣೆಗಳಲ್ಲಿ ಅದೆಷ್ಟೋ ಸಲ ಶ್ರೀರಾಮುಲು ಪರ ಪ್ರಚಾರಕ್ಕೆ ಬಂದಿದ್ದಾರೆ. 2018ರಲ್ಲಿ ಒಮ್ಮೆ ಶ್ರೀರಾಮುಲು ಅವರಿಗೆ ಅಮಿತ್‌ ಷಾ ಈ ಬಗ್ಗೆ  ಸೂಕ್ಷ್ಮವಾಗಿ ಎಚ್ಚರಿಕೆಯನ್ನೂ ನೀಡಿದ್ದರು.

ಇನ್ನು ಕಳೆದ ತಿಂಗಳು ಹರಪನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಶ್ರೀರಾಮುಲು ಮತ್ತು ಸ್ಥಳೀಯ ಶಾಸಕ ಕರುಣಾಕರ ರೆಡ್ಡಿಯವರೊಂದಿಗೆ ಪಾಲ್ಗೊಂಡಿದ್ದ ಜನಾರ್ದನ ರೆಡ್ಡಿ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇನೆ. ಆ ವೇಳೆ ಇಲ್ಲಿನ ಪ್ರತಿ ಹಳ್ಳಿಗಳಿಗೂ ಬರುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ | ಲಿಂಗಾಯತ ಧರ್ಮ ನಾವು ರಾಜಕೀಯಕ್ಕೆ ಬಳಸುವುದಿಲ್ಲ: ಎಂ.ಬಿ.ಪಾಟೀಲ್

Exit mobile version