Site icon Vistara News

Chamarajpet Maidan | ಗಣರಾಜ್ಯೋತ್ಸವ ಆಚರಣೆಗೂ ಹಿಂದು ಸಂಘಟನೆಗಳ ಪಟ್ಟು, ಸಿಗುತ್ತಾ ಅನುಮತಿ?

ಚಾಮರಾಜಪೇಟೆ ಮೈದಾನ

ಬೆಂಗಳೂರು: ಚಾಮರಾಜ ಪೇಟೆಯ ವಿವಾದಿತ ಈದ್ಗಾ ಮೈದಾನ (Chamarajpet Maidan) ದಲ್ಲಿ ಕಳೆದ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಅನುಮತಿ ನೀಡಿದರೆ ಜನವರಿ ೨೬ರಂದು ಗಣರಾಜ್ಯೋತ್ಸವವನ್ನೂ ಆಚರಿಸಬೇಕು ಎಂದು ಹಿಂದು ಸಂಘಟನೆಗಳು ಪಟ್ಟು ಹಿಡಿದಿದೆ. ಹೀಗಾಗಿ ಮೈದಾನ ವಿವಾದಕ್ಕೆ ಸಂಬಂಧಿಸಿ ಮತ್ತೊಮ್ಮೆ ಟೆನ್ಶನ್‌ ಆರಂಭವಾಗುವುದು ಖಾತ್ರಿಯಾಗಿದೆ.

ಮೈದಾನದಲ್ಲಿ ಕಳೆದ ಆಗಸ್ಟ್‌ ೧೫ರಂದು ಸ್ವಾತಂತ್ರ್ಯ ದಿನಾಚರಣೆ ಮಾಡಿದ ಬಳಿಕ ಕಂದಾಯ ಇಲಾಖೆ ಮೈದಾನಕ್ಕೆ ಸಂಬಂಧಿಸಿ ಮೌನಕ್ಕೆ ಜಾರಿತ್ತು. ಇದೀಗ ಜ. 26ರಂದು ಗಣರಾಜ್ಯೋತ್ಸವ ಆಚರಣೆಗೆ ಹಿಂದೂ ಸಂಘಟನೆಗಳು ಪಟ್ಟುಹಿಡಿದಿರುವುದರಿಂದ ಮತ್ತೆ ವಿವಾದ ಮುನ್ನೆಲೆಗೆ ಬಂದಿದೆ.

ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ಕೊಡುವಂತೆ ಹಿಂದು ಸಂಘಟನೆಗಳು ಈಗಾಗಲೇ ಮನವಿ ಮಾಡಿಕೊಂಡಿವೆ. ಇದರ ಆಧಾರದಲ್ಲಿ, ಸಂಘಟನೆ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಂಘಟನೆಗಳು ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ಕೋರಿವೆ ಏನು ಮಾಡಬೇಕು ಎನ್ನುವ ಅರ್ಥದಲ್ಲಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಸೂಚಿಸಿದಂತೆ ಕಂದಾಯ ಇಲಾಖೆ ಮುಂದಿನ ಹೆಜ್ಜೆ ಇಡಲಿದೆ ಎಂದು ಜಿಲ್ಲಾಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ ಸರ್ಕಾರ ಗಣರಾಜ್ಯೋತ್ಸವಕ್ಕೆ ಅನುಮತಿ ನೀಡುತ್ತದಾ ಎಂಬ ಪ್ರಶ್ನೆ ಈಗ ಎದುರಾಗಿದೆ.

ಚಾಮರಾಜಪೇಟೆ ಮೈದಾನ ವಕ್ಫ್‌ ಬೋರ್ಡ್‌ಗೆ ಸೇರಿದ್ದಾ, ಕಂದಾಯ ಇಲಾಖೆಗೆ ಸೇರಿದ್ದಾ ಎಂಬ ಬಗ್ಗೆ ಬಹು ಹಿಂದಿನಿಂದಲೇ ವಿವಾದವಿತ್ತು. ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಇದೇ ಮೈದಾನದಲ್ಲಿ ಆಚರಿಸಬೇಕು ಎಂದು ಪಟ್ಟು ಹಿಡಿಯಲಾಗಿತ್ತು. ವಿವಾದ ರಾಜ್ಯ ಹೈಕೋರ್ಟ್‌, ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿತ್ತು. ಅಂತಿಮವಾಗಿ ರಾಜ್ಯ ಸರಕಾರವೇ ಕಂದಾಯ ಇಲಾಖೆಯ ನಿರ್ದೇಶನದಡಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿತ್ತು. ಎಲ್ಲರೂ ಸಹಕಾರ ನೀಡಿದ್ದರು. ಆದರೆ, ಗಣೇಶೋತ್ಸವ ಮತ್ತಿತರ ಯಾವುದೇ ಅನ್ಯ ಆಚರಣೆಗಳಿಗೆ ಅವಕಾಶ ನೀಡಲಾಗಿಲ್ಲ.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನದಲ್ಲಿ 2006ರಲ್ಲಿ ಗಣೇಶೋತ್ಸವ, ಶಿವರಾತ್ರಿ ಆಚರಣೆ ನಡೆದಿತ್ತು?

Exit mobile version