ಬೆಂಗಳೂರು: ನೈಸ್ ಯೋಜನೆಯನ್ನು (Nice Project) ರಾಜ್ಯ ಸರ್ಕಾರ ವಶಕ್ಕೆ ಪಡೆಯಬೇಕು. ಆ ಕಂಪನಿ ವಶದಲ್ಲಿರುವ 13404 ಎಕರೆಯಷ್ಟು ರೈತರ ಭೂಮಿಯನ್ನು (Farmers Land) ಸರ್ಕಾರ ಮರು ವಶಪಡಿಸಿಕೊಳ್ಳಬೇಕು. ಕೂಡಲೇ ಈ ಕೆಲಸ ಆಗಬೇಕು. ಬಡವರ ಪರ ಮಾತನಾಡುವ ಸಿಎಂ ಸಿದ್ದರಾಮಯ್ಯ (CM Siddaramaiah) ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ? ರೈತರ ಪರ ನಿಲ್ಲುವುದಕ್ಕೆ ನಾನು ಮೀನಮೇಷ ಎಣಿಸುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ (HD Devegowda) ಎಚ್ಚರಿಕೆ ನೀಡಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ನೈಸ್ ಯೋಜನೆ ಬಗ್ಗೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರೂ ಅವರು ಈವರೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರಿಗೆ ಏನು ಕಷ್ಟ ಇದೆಯೋ ಗೊತ್ತಿಲ್ಲ. ಅವರು ಬಡವರ ಪರ ಮಾತನಾಡುತ್ತಾರೆ. ಆ ಯೋಜನೆಯಲ್ಲಿ ಇಷ್ಟೊಂದು ಅಕ್ರಮ ಆಗಿದ್ದರೂ, ಬಡವರ ಭೂಮಿ ಲೂಟಿ ಹೊಡೆಯಲಾಗಿದ್ದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಬಡವರ ಪರ ಮಾತನಾಡುವ ಸಿಎಂ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಖಾರವಾಗಿ ಪ್ರಶ್ನಿಸಿದರು.
ಕಪ್ಪುಚುಕ್ಕೆಯಾಗಿ ಉಳಿದು ಹೋಗುತ್ತದೆ
ಸಿದ್ದರಾಮಯ್ಯ ಅವರು ಎಷ್ಟು ವರ್ಷ ಆಳಿದರೂ ಈ ಕಪ್ಪುಚುಕ್ಕೆಯಿಂದ ಹೊರಗೆ ಬರಲು ಸಾಧ್ಯವಿಲ್ಲ. ಇದರ ವಿರುದ್ಧ ಅವರು ಕ್ರಮ ತೆಗೆದುಕೊಳ್ಳದೇ ಹೋದರೆ ಅವರ ರಾಜಕೀಯ ಜೀವನಕ್ಕೆ ಇದೇ ಕಪ್ಪುಚುಕ್ಕೆಯಾಗಿ ಉಳಿದು ಹೋಗುತ್ತದೆ ಎಂದು ದೇವೇಗೌಡ ಅಭಿಪ್ರಾಯಪಟ್ಟರು.
ನೈಸ್ ರಸ್ತೆ ಯೋಜನೆ ವಿಷಯ ಎಲ್ಲರಿಗೂ ಗೊತ್ತಿದೆ. ಅದರಲ್ಲಿ ಏನೇನು ನಡೆದಿದೆ ಎನ್ನುವುದೂ ತಿಳಿದಿದೆ. ಬಡವರಿಗೆ ಇದರಿಂದ ಅನ್ಯಾಯ ಆಗಿದೆ. ನಮ್ಮ ಪಕ್ಷ ಇದರ ವಿರುದ್ಧ ದನಿ ಎತ್ತಿದೆ. ವಿಧಾನಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆ ಆಗಿದೆ. ವಿಧಾನಸಭೆಯಲ್ಲಿ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ನೇಮಕ ಮಾಡಲಾಗಿತ್ತು. ಆ ಸದನ ಸಮಿತಿ ವರದಿ ಕೊಟ್ಟಿದೆ. ಎಷ್ಟು ಅಕ್ರಮ ಮಾಡಿದೆ? ಎಂಬುದು ಸೇರಿದಂತೆ ಈ ಯೋಜನೆಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಅಂತ ವರದಿ ಕೊಟ್ಟಿದೆ. ಆದರೆ, ಸರ್ಕಾರ ಅಂತಿಮ ನಿರ್ಧಾರ ಮಾಡಿಲ್ಲ. ಇದಕ್ಕೆ ಕಾರಣ ಗೊತ್ತಿಲ್ಲ ಎಂದು ಎಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಸಿಎಂಗೆ ಬರೆದಿದ್ದ ಪತ್ರ ಬಿಡುಗಡೆ
2023 ಅಕ್ಟೋಬರ್ 19 ರಂದು ನಾನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ನೈಸ್ ವಿಚಾರವಾಗಿ ಕ್ರಮಕ್ಕೆ ಆಗ್ರಹ ಮಾಡಿದ್ದೆ. ಈ ಬಗ್ಗೆ ಖುದ್ದು ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದ ಮಾಜಿ ಪ್ರಧಾನಿಗಳು, ತಾವು ಬರೆದಿದ್ದ ಪತ್ರವನ್ನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
13404 ಎಕರೆಯಷ್ಟು ರೈತರ ಭೂಮಿಯನ್ನು ನೈಸ್ ವಶಪಡಿಸಿಕೊಂಡಿದೆ. ಅದನ್ನು ಸರ್ಕಾರ ಮರು ವಶಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆ. ಈ ಯೋಜನೆಯ ಮೌಲ್ಯ 7 ಸಾವಿರ ಕೋಟಿ ಅಂತ ಸದನ ಸಮಿತಿಯೇ ವರದಿ ಕೊಟ್ಟಿದೆ. ಅಧಿಕಾರಿಗಳೇ ಈ ವರದಿ ಕೊಟ್ಟಿದ್ದಾರೆ.
ಈ ಹಿಂದೆ ಸೋನಿಯಾ ಗಾಂಧಿ ಅವರ ಬಳಿಯೂ ನೈಸ್ ಯೋಜನೆಯ ಅಕ್ರಮಗಳ ಚರ್ಚೆ ಆಗಿದೆ. ಧರ್ಮಸಿಂಗ್ ಅವರ ಕಾಲದಲ್ಲಿಯೂ ಚರ್ಚೆ ಆಗಿತ್ತು. ಆಗ ಸೋನಿಯಾ ಗಾಂಧಿ ಅವರು ಧರ್ಮಸಿಂಗ್ ಅವರಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ನಾನು ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪು
ನಾನು ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದೆ. ಒಳ್ಳೆಯ ರಸ್ತೆ ಆಗುತ್ತದೆ ಅಂತ ಮಹತ್ವಾಕಾಂಕ್ಷೆಯಿಂದ ಮಾಡಿದೆ. ಮೈಸೂರಿಗೆ ಒಂದು ಗಂಟೆಯಲ್ಲಿ ಹೋಗಬಹುದು ಅಂತ ಇದನ್ನು ಮಾಡಿದೆ. ಆದರೆ, ದೊಡ್ಡ ಪೆಟ್ಟು ಕೊಟ್ಟರು ಮಹಾನುಭಾವರು. ಸಿದ್ದರಾಮಯ್ಯ ಅವರು ಇದನ್ನು ಸರಿ ಮಾಡಲಿ. ನಮ್ಮ ಪಕ್ಷ ನೈಸ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ನಾನು ನಮ್ಮ ಪಕ್ಷದೊಂದಿಗೆ ರೈತರು ಹಾಗೂ ಬಡವರ ಪರ ಹೋರಾಟ ಮಾಡುತ್ತೇವೆ ಎಂದು ಎಚ್.ಡಿ. ದೇವೇಗೌಡ ಅವರು ನೋವು ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಅವಧಿಯಲ್ಲಿ ಹೆಚ್ಚುವರಿ ಭೂಮಿ ಕೊಡಲು ಆಗುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಲಾಗಿತ್ತು. ನೈಸ್ ಯೋಜನೆಗೆ ಹೆಚ್ಚುವರಿ ಭೂಮಿ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಯಡಿಯೂರಪ್ಪ ಅವರ ಸರಕಾರ ಪ್ರಮಾಣ ಪತ್ರ (ಅಫಿಡವಿಟ್) ಸಲ್ಲಿಸಿದ್ದರು. ಈ ಯೋಜನೆ ದೊಡ್ಡ ವಂಚನೆ ಎಂದು ಯಡಿಯೂರಪ್ಪ ಅವರೇ ಅಫಿಡವಿಟ್ ಹಾಕಿದ್ದರು. ಕುಮಾರಸ್ವಾಮಿ ಈಗಾಗಲೇ ಬಿಜೆಪಿ ಜತೆ ಚರ್ಚೆ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡುತ್ತಾರೆ ಎಂದು ದೇವೇಗೌಡರು ವಿವರಿಸಿದರು.
ಡಿಸಿಎಂ ವಿರುದ್ಧ ಕಿಡಿ
ಈ ಸರ್ಕಾರ ಪಂಚರಾಜ್ಯ ಚುನಾವಣೆಯಲ್ಲಿ ಎಷ್ಟು ಹಣ ಎಲ್ಲಿಗೆ ತೆಗೆದುಕೊಂಡು ಹೋಗಿದೆ ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಇದು ಕರ್ನಾಟಕ ಜನರ ಸಂಪತ್ತು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಉದ್ದಟತನವಾಗಿದೆ. ಅವರು ಎಲೆಲ್ಲಿ ಹೋಗಿದ್ದಾರೆ? ಎಷ್ಟು ಹಣ ಸಾಗಿಸಿದ್ದಾರೆ? ಎಷ್ಟು ಹಣವನ್ನು ಚುನಾವಣೆ ಆಯೋಗ ಸೀಜ್ ಮಾಡಿದೆ? ಈ ಹಣ ಹೋಗಿರೋದು ಬೆಂಗಳೂರಿನಿಂದ ಎನ್ನುವುದು ಜನರಿಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಿಡಿಕಾರಿದರು.
ನೈಸ್ ಮಾತ್ರ ಅಲ್ಲ. ಬೆಂಗಳೂರಿನ ಎಲ್ಲ ಸಂಸ್ಥೆಗಳು ಹಾಗೂ ಜಲ ಸಂಪನ್ಮೂಲ ಇಲಾಖೆ ಅವರ ಬಳಿಯೇ ಇದೆ. ಏನೇನು ಆಗುತ್ತಿದೆ ಎಂದು ಹೇಳಿದರೆ ನಾಚಿಕೆ ಆಗುತ್ತದೆ. ದೇಶದ ಬಗ್ಗೆ, ಬಡವರ ಬಗ್ಗೆ ಉಪದೇಶ ಮಾಡುವ ಸಿಎಂ ಅವರು ಈ ಯೋಜನೆ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ನಾನು ಬಡವರ ಪರ ಅಂತಾರೆ. ಅಹಿಂದ ಅಂತಾರೆ. ಇದನ್ನು ಯಾಕೆ ಇವರು ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸೇಡಿನ ರಾಜಕೀಯ ಬೇಡ
ತೆಲಂಗಾಣದಲ್ಲಿ ಮುಸ್ಲಿಮರಿಗೆ ಬಜೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಜತೆ ಮಂತ್ರಿ ಆಗಿದ್ದೋರು ನಿತ್ಯ ಏನೋ ಮಾತನಾಡುತ್ತಾರೆ. ಟಿಪ್ಪು ಬಿಟ್ಟು ಬೇರೆ ಏನು ಅಂತ ಮಾತಾಡ್ತಾರೆ. ನಾವು ರಾಮನನ್ನು ಪೂಜೆ ಮಾಡುತ್ತೇವೆ. ಅದರಲ್ಲಿ ನಮಗೇನೂ ಸಂಕೋಚ ಇಲ್ಲ. ನಮಗೆ ಭಕ್ತಿ ಇದೆ. ದೇವರಲ್ಲಿ ನಂಬಿಕೆ ಇದೆ ಎಂದರು.
ಈದ್ಗಾ ಗಲಾಟೆಯಲ್ಲಿ ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ನಾನು ದರ್ಗಾಗೆ ಹೋಗಿದ್ದೇನೆ. ತಿರುಪತಿಗೆ ಹೋಗಿದ್ದೇನೆ. ಬಿಜೆಪಿ ಜತೆ ಹೋದಾಗ ಸೇಡಿನ ರಾಜಕೀಯ ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ನಾವು ಹೇಳಿದ್ದೇವೆ. ಎನ್‌ಡಿಎ ಮಿತ್ರಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ನಮ್ಮ ಮಿತ್ರಪಕ್ಷದ ಬಗ್ಗೆ ಮಾತನಾಡುತ್ತಿದ್ದೇವೆ. ಮುಂದೆಯೂ ಹೇಳುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಹಿಂದು ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರ ಮೇಲೆ ಹಿಂದಿನ ಕೇಸ್ ರೀಓಪನ್ ಮಾಡಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಕಾಂಗ್ರೆಸ್‌ನವರು ಇದು ಸೇಡಿನ ರಾಜಕೀಯ ಮಾಡಿದ್ದಾರೆ. ಎನ್‌ಡಿಎ ಜತೆ ಇರುವ ನಾವು ಈ ಸಮಯದಲ್ಲಿ ನಮ್ಮ ಅಭಿಪ್ರಾಯವನ್ನು ಹೇಳುವ ಸ್ವಾತಂತ್ರ್ಯ ಇದೆ. ಸೇಡಿನ ರಾಜಕೀಯ ಮೂಲಕ ಇವರು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಮಯದಲ್ಲಿ ನಾವು ಮಾತನಾಡುವ ಅವಶ್ಯಕತೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಂತ್ಯವಾಗಲಿದೆ
60 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ಇವರು ಹೇಳ್ತಾರೆ. ಇವತ್ತು ಹೇಳುತ್ತಿದ್ದೇನೆ, ಕರ್ನಾಟಕದಲ್ಲಿ ಇವರು ಅಂತ್ಯ ಕಾಣುತ್ತಿದ್ದಾರೆ. ನಾವು ಅವರನ್ನು ನಾವು ಸೋಲಿಸಿಯೇ ಸೋಲಿಸುತ್ತೇವೆ. ಈ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದರು.
ಎನ್‌ಡಿಎಗೆ ಭಾರಿ ಗೆಲುವು
ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಅಂತಾರೆ. ಉಪವಾಸ, ನದಿಸ್ನಾನ, ತಣ್ಣೀರು ಸ್ನಾನ ಇವೆಲ್ಲ ಮಾಡುತ್ತಿದ್ದಾರೆ. ಇಲ್ಲಿ ಇವರಿಗೆ ಸಿದ್ದರಾಮ ಮಾತ್ರ. ಸಿದ್ದರಾಮ ಹೆಸರಿನಲ್ಲಿ NDA ಸೋಲಿಸಿ 20 ಸೀಟು ಗೆಲ್ಲುತ್ತೇವೆ ಅಹಂನಿಂದ ಇವೆಲ್ಲ ಸೃಷ್ಟಿ ಮಾಡ್ತಿದ್ದಾರೆ. 20 ಸೀಟು ಗೆಲ್ಲೋದು ಎಂದರೆ ಕನಸು ಮಾತ್ರ. ಈ ಬಾರಿ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜನರು ಎನ್ ಡಿಎ ಮೈತ್ರಿಗೆ ಅಭೂತಪೂರ್ವ ತೀರ್ಪು ಕೊಡುತ್ತಾರೆ ಎಂದು ಮಾಜಿ ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಚಿನ್ನದ ಕತ್ತಿ ರಾಮನಿಗೆ ಅರ್ಪಣೆ
ಹಿಂದೆ ಪ್ರಧಾನಿ ಆಗಿದ್ದಾಗ ನನಗೆ ಒಮನ್ ದೇಶದಲ್ಲಿ ಚಿನ್ನದ ಕತ್ತಿಯನ್ನು ಉಡುಗೋರೆಯಾಗಿ ನೀಡಿದ್ದರು. ಅದನ್ನು ತೆರಿಗೆ ಕಟ್ಟಿ ಬೆಂಗಳೂರಿಗೆ ತರಿಸಿಕೊಂಡು ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀರಾಮ ದೇವರಿಗೆ ಅರ್ಪಿಸಿದೆ. ಆ ಕತ್ತಿಯನ್ನು ನಾನೇ ಇಟ್ಟುಕೊಳ್ಳಬಹುದಿತ್ತು. ಆದರೆ, ದೈವಸೇವೆ ನಮ್ಮ ನಂಬಿಕೆ. ಅದನ್ನೇ ಮಾಡಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಇದನ್ನೂ ಓದಿ: Drought Relief: ರೈತರಿಗೆ 2 ಸಾವಿರ ರೂಪಾಯಿ ಬರ ಪರಿಹಾರ ಬಿಡುಗಡೆ
ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಮಾಜಿ ಶಾಸಕ ಮಹದೇವು, ಅಶ್ವಿನ್ ಕುಮಾರ್, ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ. ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.