ತುಮಕೂರು: ತಾಂತ್ರಿಕ ದೋಷದಿಂದ ಸೆಪ್ಟೆಂಬರ್ 24ರ ರಾತ್ರಿಯಿಂದಲೂ ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆ (Ambulance Service) ಯಲ್ಲಿ ವ್ಯತ್ಯಯವಾಗಿದೆ. ನೂರಾರು ರೋಗಿಗಳು ಸಕಾಲದಲ್ಲಿ ಆ್ಯಂಬುಲೆನ್ಸ್ ಸೇವೆ ಸಿಗದೆ ಪರದಾಡುತ್ತಿದ್ದಾರೆ. ಅದರಲ್ಲೀಗ ತುಮಕೂರಿನ ಮಧುಗಿರಿ ತಾಲೂಕಿನ ಐಡಿ ಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದ ಪರಿಣಾಮ ಮೃತಪಟ್ಟಿದ್ದಾರೆ.
ಜಯಮ್ಮ (65) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕುಟುಂಬಸ್ಥರು 108 ಆ್ಯಂಬುಲೆನ್ಸ್ಗೆ ಕರೆ ಮಾಡಿದರು. ಆದರೆ ಒಂದು ಗಂಟೆ ಕಾದರೂ ಆ್ಯಂಬುಲೆನ್ಸ್ ಬರಲಿಲ್ಲ. ಕಾದುಕಾದು ಬೇಸತ್ತ ಕುಟುಂಬದವರು ತಾಲೂಕು ಆರೋಗ್ಯಾಧಿಕಾರಿಗೆ (ಟಿಎಚ್ಒ) ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಜಯಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಬಳಿಕ ಟಿಎಚ್ಒ ಅವರೇ ಖುದ್ದಾಗಿ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ.
ಆದರೆ ಆ್ಯಂಬುಲೆನ್ಸ್ ಜಯಮ್ಮನವರ ಮನೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದರು. ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರೆ ಬದುಕುತ್ತಿದ್ದರು. ಆ್ಯಂಬುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ಹಾಗೇ, ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಸ್ಯೆ ಸರಿಯಾದ್ರೂ ಕರೆ ಸ್ವೀಕರಿಸ್ತಿಲ್ಲ !
ರಾಜ್ಯಾದ್ಯಂತ ಸೆ.24ರ ರಾತ್ರಿಯಿಂದ ಆ್ಯಂಬುಲೆನ್ಸ್ ಸೇವೆ ಸಿಗುತ್ತಿಲ್ಲ. ಫೋನ್ ಸಂಪರ್ಕ ಸಿಗುತ್ತಿಲ್ಲ, ಅದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿತ್ತು. ಆದರೆ ಈಗೀಗ ಅತ್ತ ಫೋನ್ ರಿಂಗ್ ಆಗುತ್ತಿದ್ದರೂ ಅದನ್ನು ಸ್ವೀಕರಿಸುತ್ತಿಲ್ಲ. ಭಾನುವಾರ ಆಗಿದ್ದರಿಂದ ಆರೋಗ್ಯ ಇಲಾಖೆ ತಾಂತ್ರಿಕ ದೋಷ ಪರಿಹಾರ ಮಾಡುತ್ತಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಇದುವರೆಗೆ 108 ಆ್ಯಂಬುಲೆನ್ಸ್ ಬೇಕೆಂದು ಸುಮಾರು 8000 ಕರೆಗಳು ಹೋಗಿವೆ. ಅದರಲ್ಲಿ 2000 ಕರೆಗಳಂತೂ, ತುಂಬ ಗಂಭೀರ ಪರಿಸ್ಥಿತಿ ಇದೆ ಎಂದೇ ಹೇಳಿದ್ದವು.
ಇದನ್ನೂ ಓದಿ: ರಾಜ್ಯದಲ್ಲಿ ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ; ರೋಗಿಗಳಿಗೆ ಸಂಕಷ್ಟ