ಮಂಗಳೂರು: ಸೋಮೇಶ್ವರ ಬೀಚ್‌ನಲ್ಲಿ ಕೇರಳದ ಕಾಸರಗೋಡಿನ ಮೂವರು ಹಿಂದು ವಿದ್ಯಾರ್ಥಿನಿಯರ ಜತೆ ಕಣ್ಣೂರಿನ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು ತಿರುಗುತ್ತಿದ್ದಾಗ, ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದಿನೇದಿನೆ ಬೆಳವಣಿಗೆಗಳು ಆಗುತ್ತಿವೆ. ಇದೀಗ ಉಳ್ಳಾಲ ಮಹಿಳಾ ರಕ್ಷಣಾ ವೇದಿಕೆಯವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಇದೊಂದು ದಿ ಕೇರಳ ಸ್ಟೋರಿ’ ಮಾದರಿಯ ಪ್ರಕರಣ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ಉಳ್ಳಾಲ ಮಹಿಳಾ ರಕ್ಷಣಾ ವೇದಿಕೆ ಅಧ್ಯಕ್ಷೆ ಧನಲಕ್ಷ್ಮೀ ‘ಜೂ.1ರಂದು ಸೋಮೇಶ್ವರ ಬೀಚ್‌ನಲ್ಲಿ ನಡೆದ ಘಟನೆ ಈ ಉಳ್ಳಾಲದ ತಾಯಂದಿರ ನಿದ್ದೆಗೆಡಿಸಿದೆ. ಮೂರು ಜನ ಹೆಣ್ಣುಮಕ್ಕಳು ಯಾವುದೋ ಪೊಳ್ಳುನೆಪ ಹೇಳಿಕೊಂಡು ಅನ್ಯಕೋಮಿನ ಯುವಕರೊಂದಿಗೆ ಬಂದಿದ್ದರು. ಅದರಲ್ಲಿ ಒಬ್ಬಳು ಹುಡುಗಿಗೆ ಅನ್ಯಕೋಮಿನ ಯುವಕನೊಂದಿಗೆ ಸ್ನೇಹವಿತ್ತು. ಆಕೆ ತನ್ನೊಂದಿಗೆ ಇನ್ನಿಬ್ಬರು ಹುಡುಗಿಯನ್ನು ಕರೆದುಕೊಂಡುಬಂದಿದ್ದಳು. ದಿ ಕೇರಳ ಸ್ಟೋರಿ ಸಿನಿಮಾ ನೋಡಿದರೆ ಗೊತ್ತಾಗುತ್ತದೆ ನಮ್ಮ ಹೆಣ್ಣುಮಕ್ಕಳು ಎಷ್ಟು ಅಪಾಯದಲ್ಲಿದ್ದಾರೆ ಎಂಬುದು. ಅಂಥದ್ದರಲ್ಲಿ ಹೀಗೊಂದು ಘಟನೆ ನಡೆದಿದೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ, ನಮ್ಮ ಅಮಾಯಕ ಗಂಡುಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬೀಚ್ ಬಳಿ ಹುಡುಗರು-ಹುಡುಗಿಯರು ಮಲಗಿಕೊಂಡು ತುಂಬ ಅಶ್ಲೀಲವಾಗಿ ವರ್ತಿಸಿದ್ದಾರೆ. ಅದರ ವಿಡಿಯೊಗಳು ಕೂಡ ಇದೆ. ಅವರ ಕೆಟ್ಟ ವರ್ತನೆಯನ್ನು ಪ್ರಶ್ನಿಸಲು ಹೋದ ಅಮಾಯಕ ಯುವಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೂಡಲೇ ಆ ಮೂವರೂ ಹುಡುಗಿಯರನ್ನು ಕರೆದು ವಿಚಾರಣೆ ನಡೆಸಬೇಕು. ಅಮಾಯಕರನ್ನು ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಧನಲಕ್ಷ್ಮೀ ಮತ್ತು ಇತರ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.