Site icon Vistara News

Government Academy : ಅಕಾಡೆಮಿಗಳ ನೇಮಕದಲ್ಲಿ ಮಹಿಳಾ ಪ್ರಾತಿನಿಧ್ಯ ನೀಡಿ; ಸಿಎಂಗೆ ಪತ್ರಕರ್ತೆಯರ ಮನವಿ

women journalists

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳ (Government Academy) ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂದು ಕರ್ನಾಟಕ ಪತ್ರಕರ್ತೆಯರ ಸಂಘವು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ರಾಜ್ಯದಾದ್ಯಂತ ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ನೂರಾರು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಗಿದೆ. ಆದರೆ, ಪತ್ರಕರ್ತೆಯರಿಗೆ ಸಿಗಬೇಕಾದ ಸೂಕ್ತ ಸ್ಥಾನಮಾನ ದೊರೆತಿಲ್ಲ. ಪತ್ರಕರ್ತೆಯರ ವೃತ್ತಿಗೆ ಪೂರಕವಾದ ಬೆಳವಣಿಗೆಯಲ್ಲಿ ಅಭಿವೃದ್ಧಿ ಸಾಧಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕೆಂದು ಕೋರಿದರು.

ಕರ್ನಾಟಕ ಮಾಧ್ಯಮ ಆಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವಾಗ ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಬೇಕು. ಅಂತೆಯೇ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿವಿಧ ಸಮಿತಿಗಳು ಹಾಗೂ ಮಾಧ್ಯಮಕ್ಕೆ ಸಂಬಂಧಿಸಿದ ಆಯ್ಕೆ ಸಮಿತಿಗಳಲ್ಲಿ ಕನಿಷ್ಠ ಇಬ್ಬರು ಪತ್ರಕರ್ತೆಯರ ನೇಮಿಸಬೇಕು. ಸಂಘಕ್ಕೆ ಕಾರ್ಯಚಟುವಟಿಕೆಗಳಿಗೆ ಅಗತ್ಯ ಕಟ್ಟಡ ಅಥವಾ ನಿವೇಶನ ಒದಗಿಸುವುದು, ಪತ್ರಕರ್ತೆಯರಿಗೆ ಮಾಸಾಶನ ನೀಡುವಲ್ಲಿ ವಯಸ್ಸಿನ ಮಿತಿ ಕಡಿಮೆ ಮಾಡುವುದು, ಆರೋಗ್ಯ ವಿಮೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮನವಿ ಪತ್ರವನ್ನು ಪರಿಶೀಲಿಸಿ, ಶೀಘ್ರ ಹಾಗೂ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ : Shimoga News | ಕುಗ್ರಾಮಗಳಲ್ಲಿ ಪತ್ರಕರ್ತರ ವಾಸ್ತವ್ಯ: ಗ್ರಾಮದ ಅಭಿವೃದ್ಧಿ ಕುರಿತು ಸರಕಾರಕ್ಕೆ ಸಮಗ್ರ ವರದಿ

ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ಉಪಾಧ್ಯಕ್ಷೆ ವಾಣಿಶ್ರೀ, ಮಾಜಿ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಪದಾಧಿಕಾರಿಗಳಾದ ಚೇತನಾ ಬೆಳಗೆರೆ, ಶ್ರೀಜಾ ವಿ.ಎನ್., ಶಾಂತ ತಮ್ಮಯ್ಯ, ಶೀಲಾ ಸಿ. ಶೆಟ್ಟಿ, ಗೊರೂರು ಪಂಕಜ, ಹಲೀಮತ್ ಸಾದಿಯಾ ಹಾಗೂ ಮೇರಿ ಜೋಸೆಫ್ ಉಪಸ್ಥಿತರಿದ್ದರು

Exit mobile version