ಶಿವಮೊಗ್ಗ: “ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೃಜನಶೀಲತೆ (Creativity) ಹೆಚ್ಚಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು” ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ (ಮಾ.18) ಮನ್ವಂತರ ಮಹಿಳಾ ಮಂಡಳ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಮಹಿಳೆಯರಿಗಾಗಿ ಮಹಿಳಾ ಕೇಂದ್ರಿತವಾದ “ಮತ್ತೆ ಆಡೋಣ ಬನ್ನಿ” ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರುವ ಮಹಿಳೆ ಸಾಕಷ್ಟು ಒತ್ತಡ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಕುಟುಂಬ ವೃತ್ತಿ ನಿರ್ವಹಣೆ ಜತೆಗೆ ಸಾಮಾಜಿಕ ಕಾರ್ಯದಲ್ಲೂ ಮಹಿಳೆ ಹೆಚ್ಚು ತೊಡಗಿಕೊಳ್ಳಬೇಕು. ಎಂಥದ್ದೇ ಕಠಿಣ ಸಂದರ್ಭಗಳನ್ನು ನಿಭಾಯಿಸುವಂತಹ ಸೃಜನಶೀಲತೆ ಮಹಿಳೆಯರಲ್ಲಿ ಅಗತ್ಯವಾಗಿದ್ದು, ಸಾಮರ್ಥ್ಯಕ್ಕೆ ಇಂಬು ನೀಡುವಂತೆ ಸಾಮಾನ್ಯ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಆಚಾರ್ ಗ್ರೂಪ್ ಆಫ್ ಕಂಪನಿಯ ಅಧ್ಯಕ್ಷ ಜೋಯ್ಸ್ ರಾಮಾಚಾರ್ ಮಾತನಾಡಿ, “ಸಮಾಜವನ್ನು ತಿದ್ದುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಮಹಿಳೆಯರು ಹಿಂಜರಿಕೆ ತೊರೆದು ಧೈರ್ಯದಿಂದ ಮುನ್ನಡೆಯಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನ್ವಂತರ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಮಾತನಾಡಿದರು. ಉದ್ಯಮಿ ವಾರಿಜಾ ರಾಮಾಚಾರ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ರಂಗಭೂಮಿ ಕಲಾವಿದ ಕಾಂತೇಶ್ ಕದರಮಂಡಲಗಿ, ರಂಗ ನಿರ್ದೇಶಕ ಹೊನ್ನಾಳಿ ಚಂದ್ರಶೇಖರ್, ಕಮಲ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ ಉಪಸ್ಥಿತರಿದ್ದರು. ಲತಾ ಸೋಮಶೇಖರ್ ಸ್ವಾಗತಿಸಿದರು. ಜೋಯ್ಸ್ ರಾಮಾಚಾರ್ ದಂಪತಿಯನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್‌ನನ್ನು ಕೊಂದೇ ತೀರುತ್ತೇನೆ, ನನ್ನ ಜೀವನದ ಗುರಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್