ಚಿಕ್ಕಮಗಳೂರು: ಅನಸೂಯಾ ಜಯಂತಿ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಮಹಿಳೆಯರ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ 2000ಕ್ಕೂ ಹೆಚ್ಚು ಮಹಿಳೆಯರು ಶೋಭಾಯಾತ್ರೆಯಲ್ಲಿ ದತ್ತ ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದರು.
ನಗರದ ಬೋಳರಾಮೇಶ್ವರ ದೇವಾಲಯದಿಂದ ಆರಂಭವಾದ ಸಂಕೀರ್ತನಾ ಯಾತ್ರೆ ಬಳಿಕ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾವರೆಗೆ ಸಾಗಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಕೀರ್ತನಾ ಯಾತ್ರೆಗೆ ಸಾವಿರಾರು ಪೊಲೀಸರ ಭದ್ರತೆ ಏರ್ಪಡಿಸಲಾಗಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕ ಸಿ.ಟಿ.ರವಿ ಮತ್ತಿತರರು ಮೆರವಣಿಗೆಯಲ್ಲಿ ಭಾಗಿಯಾಗಿ ದತ್ತ ಪಾದುಕೆ ದರ್ಶನ ಪಡೆದರು.
ಜಿಲ್ಲಾಡಳಿತ ನಿರ್ಮಿಸಿರುವ ಕೃತಕ ಶೆಡ್‌ನಲ್ಲಿ ದತ್ತ ವಿಗ್ರಹಕ್ಕೆ ಪೂಜೆ ನೆರವೇರಿಸಲಾಯಿತು. ಗಣಪತಿ ಹೋಮ, ದುರ್ಗಾ ಹೋಮ, ಹನುಮ ಹೋಮ ನಡೆಸಲಾಯಿತು.
ಇದನ್ನೂ ಓದಿ | ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಸ್ಥಳದಲ್ಲೇ ಮಂದಿರ ಕಟ್ತೇವೆ; ಹನುಮ ಭಕ್ತರ ಶಪಥ
ಆರ್. ಅಶೋಕ್ ದತ್ತ ಮಾಲಾಧಾರಣೆ
ದತ್ತ ಜಯಂತಿ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ದತ್ತ ಮಾಲಾಧಾರಣೆ ಮಾಡಿದರು. ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಶೋಕ್ ಅವರು ದತ್ತಮಾಲ ಧಾರಣೆ ಮಾಡಿದರು. ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು. ಸೋಮವಾರ ಬೆಳಗ್ಗೆ ದತ್ತಪೀಠಕ್ಕೆ ತೆರಳಿ ಅವರು ವಿಶೇಷ ಪೂಜೆ ನೆರವೇರಿಸಲಿದ್ದು, ಸಂಜೆ ಬೃಹತ್ ಶೋಭ ಯಾತ್ರೆಯಲ್ಲಿ ದತ್ತ ಭಕ್ತರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ನಾಗೇನಹಳ್ಳಿಯಲ್ಲಿ 4 ದಿನ ನಿಷೇಧಾಜ್ಞೆ ಜಾರಿ
ಶ್ರೀರಾಮಸೇನೆಯಿಂದ ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಾಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 57ರ ಸುತ್ತಮುತ್ತ ಭಾನುವಾರದಿಂದ 4 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಾಗೇನಹಳ್ಳಿಯ ಸರ್ವೇ ನಂಬರ್ 57ರ 200 ಮೀಟರ್ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಸಾರ್ವಜನಿಕರು ಓಡಾಡದಂತೆ ಆದೇಶ ನೀಡಲಾಗಿದೆ. ಅಕ್ಕಪಕ್ಕದ ತೋಟಗಳ ರೈತರಿಗೆ ಈ ಆದೇಶ ಅನ್ವಯಿಸಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ | ಯಾವುದೇ ಧರ್ಮದ ಅತಿ ಓಲೈಕೆ ಬೇಡ; ಲಿಂಗಾಯತ ಅಧಿಕಾರಿಗಳಿಗೆ ಸ್ಥಾನ ನೀಡಿ: ಸಚಿವರಿಗೆ ಬಿಎಸ್‌ವೈ ತಾಕೀತು
ಶೋಭಾ ಯಾತ್ರೆಗೆ 5,000ಕ್ಕೂ ಹೆಚ್ಚು ಪೊಲೀಸರ ಭದ್ರತೆ
ದತ್ತ ಜಯಂತಿ (ಡಿ.26) ಅಂಗವಾಗಿ ಸೋಮವಾರ ಬೃಹತ್ ಶೋಭಾಯಾತ್ರೆ ನಡೆಯುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಸಂಪೂರ್ಣ ಕೇಸರಿಮಯವಾಗಿದೆ. ಘಟಾನುಘಟಿ ಬಿಜೆಪಿ ನಾಯಕರು ಸೇರಿ 80,000ಕ್ಕೂ ಹೆಚ್ಚು ದತ್ತ ಭಕ್ತರು ಶೋಭಾ ಯಾತ್ರೆಗೆ ಆಗಮಿಸುವ ನಿರೀಕ್ಷೆಯಿದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ನಾಯಕ ಸಿ.ಟಿ. ರವಿ, ಸುನಿಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ಭಾಗಿಯಾಗಲಿದ್ದಾರೆ. ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆಜಾದ್ ವೃತದವರೆಗೂ ಶೋಭಾ ಯಾತ್ರೆ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತೆಗಾಗಿ 5,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.