Site icon Vistara News

Womens Yakshagana : ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಗೆ ಬೆಳ್ಳಿ ಸಂಭ್ರಮ

Karnataka mahila yakshagana

ಚೈತ್ರ ರಾಜೇಶ್ ಕೋಟ

ಕರ್ನಾಟಕದ ಶ್ರೀಮಂತ ಕಲೆಯನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯು 25ನೇ ವರ್ಷಕ್ಕೆ ಕಾಲಿಟ್ಟು, ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದೆ. ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ (Womens Yakshagana) ಬೆಳ್ಳಿ ಹಬ್ಬದ ಸಂಭ್ರಮ ಇದೇ ಸಪ್ಟೆಂಬರ್ 10ರಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಯಕ್ಷಗಾನದ ವಿವಿಧ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಲಿದೆ.

ಗತಕಾಲದ ಪರಂಪರೆಯ ಹಿರಿಮೆ, ದೈವೀ ಕಲೆಯೆಂಬ ಗರಿಮೆ, ಬಣ್ಣ-ಭಿನ್ನಾಣಗಳ ಕಲಾತ್ಮಕ ಕುಲುಮೆ, ಪುರಾಣ-ಇತಿಹಾಸಗಳ ಗೊಂಚಲಿನ ಮಹಿಮೆಯಿರುವ ಕರಾವಳಿ ಭಾಗದ ಆರಾಧನ ಕಲೆ ಹಾಗೂ ಕರ್ನಾಟಕದ ಶ್ರೀಮಂತ ಕಲೆಯೇ ಯಕ್ಷಗಾನ. ಭಾಗವತಿಕೆ-ಚಂಡೆ-ಮದ್ದಲೆಗಳ ಝೆಂಕಾರದ ಜತೆಗೆ ಹೆಜ್ಜೆ-ಗೆಜ್ಜೆಗಳ ಸಂಕಲನವಾಗಿದೆ. ಇದರೊಂದಿಗೆ ವೇಷಭೂಷಣವು ಎಲ್ಲರನ್ನು ಆಕರ್ಷಿಸಿ ಮನಸೂರೆಗೊಳಿಸುತ್ತದೆ. ಹಿಂದಿನಿಂದಲೂ ಯಕ್ಷಗಾನ ಗಂಡುಕಲೆ ಎಂದು ಪ್ರಚಲಿತದಲ್ಲಿದ್ದರೂ ಹೆಣ್ಣು ಕೂಡ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಬಲ್ಲಳು ಎಂದು ಇತ್ತೀಚೆಗೆ ಅನೇಕ ಮಹಿಳೆಯರು ಸಾಬೀತು ಪಡಿಸುತ್ತಿದ್ದಾರೆ.

ಬ್ಯಾಂಕ್‌ ಮ್ಯಾನೇಜರ್‌ ಯಕ್ಷಗಾನ ಪ್ರೀತಿ

1998ರ ಆ ಕಾಲದಲ್ಲಿ, ಹೆಣ್ಣು ಗೆಜ್ಜೆ ಕಟ್ಟಿ ಕುಣಿಯುವುದು ಸ್ವಲ್ಪ ಕಷ್ಟದ ಪರಿಸ್ಥಿತಿ ಇತ್ತು. ಈ ಸವಾಲುಗಳ ಮಧ್ಯದಲ್ಲೇ ಬೆಂಗಳೂರಿನಂತಹ ಮಹಾನಗರದಲ್ಲಿ ಮಹಿಳೆಯರನ್ನು ಸಂಘಟಿಸಿ ತರಬೇತಿ ನೀಡಿ ಮಹಿಳೆಯರು ಕೂಡ ಯಕ್ಷಗಾನವನ್ನು ಮಾಡಬಲ್ಲರು ಎಂದು ತೋರಿಸಿ, ಸಾಧಿಸಿದವರು ಕೆ.ಗೌರಿ. ಪತಿ ಶ್ರೀನಿವಾಸ ಸಾಸ್ತಾನ ಯಕ್ಷಗಾನ ತಂಡವನ್ನು ಕಟ್ಟಿ ಪ್ರದರ್ಶನ ನೀಡುತ್ತಿರುವುದನ್ನು ಕಂಡ ಗೌರಿಯವರು, ನಾನ್ಯಾಕೆ ಮಹಿಳಾ ಯಕ್ಷಗಾನ ತಂಡವನ್ನು ಕಟ್ಟಬಾರದು? ಎಂದು ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಎಂಬ ಸಂಸ್ಥೆವನ್ನು ಕಟ್ಟಿದರು.

ಶ್ರೀನಿವಾಸ್‌ ಹಾಗೂ ಗೌರಿ ಯಕ್ಷಗಾನ ಕಲಾವಿದರು

ಪ್ರಸ್ತುತ ಬೆಂಗಳೂರಿನಲ್ಲಿ ಆಸಕ್ತ ಮಹಿಳೆಯರು ಮತ್ತು ಮಕ್ಕಳಿಗೆ ಯಕ್ಷಗಾನದ ತರಬೇತಿಯನ್ನು ಗೌರಿ ಅವರು ನೀಡುತ್ತಿದ್ದಾರೆ. ಮಹಿಳೆಯರಿಂದ ಪ್ರಸಂಗಗಳನ್ನು ಮಾಡಿಸಿ, ಪ್ರದರ್ಶನ ನೀಡುತ್ತಿದ್ದಾರೆ. ಗೌರಿಯವರು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರೂ, ಇವರನ್ನು ಅತೀ ಹೆಚ್ಚು ಆಕರ್ಷಿಸಿದ್ದು ಯಕ್ಷಗಾನ. ಹಾಗಾಗಿ ತಮ್ಮ ನಿವೃತ್ತಿಯ ಜೀವನದಲ್ಲೂ ಕಲೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಆಗೀನ ಕಾಲದಲ್ಲಿ ಮಹಿಳಾ ತಂಡವನ್ನು ಕಟ್ಟಿ ಬೆಳೆಸುವುದು ಕಷ್ಟವೇ ಆಗಿದ್ದರೂ, ಎದೆಗುಂದದೇ ಮುನ್ನಡೆಸುತ್ತಾ ಬಂದಿದ್ದಾರೆ. ಈ ಮಹಿಳಾ ತಂಡ ಪ್ರಸ್ತುತ 25ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕಲೆ ಯಾರೊಬ್ಬನ ಸ್ವತ್ತಲ್ಲ ಯಾರು ಅದನ್ನು ಆಸಕ್ತಿಯಿಟ್ಟುಕೊಂಡು, ಸತತ ಪರಿಶ್ರಮ ಪಟ್ಟು ಕಲಿಯುತ್ತಾರೋ ಅವರಿಗೆ ಖಂಡಿತ ಒಲಿಯುತ್ತದೆ ಎನ್ನುವುದಕ್ಕೆ ಈ ಸಂಸ್ಥೆಯೇ ಪ್ರತ್ಯಕ್ಷ ಸಾಕ್ಷಿ.

ಇದನ್ನೂ ಓದಿ: Nikhil Kumaraswamy: ಮುದ್ದು ಕೃಷ್ಣನಾಗಿ ಮಿಂಚಿದ ನಟ ನಿಖಿಲ್ ಕುಮಾರಸ್ವಾಮಿ ಪುತ್ರ

ಯಕ್ಷಗಾನ ಪುರಷರಿಗಷ್ಟೇ!

ಪುರುಷರಿಗಷ್ಟೇ ಈ ಯಕ್ಷಗಾನ ಒಲಿಯುವುದು ಎನ್ನುವ ಮಾತಿತ್ತು. ಇಂತಹವರ ಮಧ್ಯೆ ಪುಂಡುವೇಷದಿಂದ ಹಿಡಿದು ರಾಜ ಗಾಂಭೀರ್ಯವಿರುವ ಎಲ್ಲಾ ರೀತಿ ವೇಷಗಳನ್ನು ಮಾಡಿ ತೋರಿಸಿದ್ದಾರೆ. ನಾಟ್ಯದಿಂದ ಹಿಡಿದು ಸಂಭಾಷಣೆಯಲ್ಲೂ ಹೊಸ ಸಂಚಲನವನ್ನು ಮೂಡಿಸಿ ಯಕ್ಷಪ್ರೇಮಿಗಳನ್ನು ಆಕರ್ಷಿಸಿದ್ದಾರೆ. ರಾಮಾಯಣ, ಮಹಾಭಾರತ, ಪುರಾಣಗಳ ಪ್ರಸಂಗಗಳನ್ನು ಪ್ರದರ್ಶಿಸಿದ್ದಲ್ಲದೇ, ಸಾಮಾಜಿಕ ಸಂದೇಶಗಳನ್ನೊಳಗೊಂಡ ಅನೇಕ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸಿ ಜನಮೆಚ್ಚುಗೆಯನ್ನು ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲೇ ನಡೆಯುವ ಯಕ್ಷಗಾನವನ್ನು ಕನ್ನಡೇತರರು ನೋಡಲಿ ಎಂದು ಹಿಂದಿ, ಇಂಗ್ಲೀಷ್ ಭಾಷೆಯಲ್ಲೂ ಯಕ್ಷಗಾನವನ್ನು ಪ್ರದರ್ಶಿಸಿದ್ದಾರೆ. ಕೋಟ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆ ಎಂಬ ವಿಶೇಷ ಪ್ರಯೋಗವನ್ನು ಪ್ರದರ್ಶನ ರೂಪದಲ್ಲಿ ನೀಡಿ, ಯಕ್ಷ ಪ್ರೇಮಿಗಳಿಂದ ಈ ತಂಡದವರು ಭೇಷ್ ಎನಿಸಿಕೊಂಡಿದ್ದಾರೆ. ಯುವ ಪೀಳಿಗೆಗೆ ಯಕ್ಷಗಾನದ ಪರಿಚಯವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಯಕ್ಷಗಾನ ಪ್ರದರ್ಶನ ನೀಡಿ, ಕಲೆಯನ್ನು ಬೆಳೆಸುವಲ್ಲಿ ಸಾಕ್ಷಿಯಾಗಿದ್ದಾರೆ.

ದೇಶ-ವಿದೇಶಗಳಲ್ಲಿ ಸೈ ಎನಿಸಿಕೊಂಡ ಮಹಿಳೆಯರು

ಇಲ್ಲಿ ಯಾರೂ ವೃತ್ತಿಪರ ಕಲಾವಿದರಿಲ್ಲ, ಎಲ್ಲರೂ ಕಲೆಯ ಮೇಲಿನ ಪ್ರೀತಿಯಿಂದ, ಯಕ್ಷಗಾನವನ್ನು ಅಪ್ಪಿಕೊಂಡವರೇ ಇದ್ದಾರೆ. ತಮ್ಮ ವೃತ್ತಿಯಲ್ಲಿ ಬೇರೆ ಬೇರೆ ಸ್ಥಾನವನ್ನು ಹೊಂದಿದವರು, ಯಕ್ಷಗಾನದಲ್ಲೂ ತಮಗೆ ಕೊಟ್ಟ ಪಾತ್ರಕ್ಕೆ ಜೀವ ತುಂಬುವ ಅದೆಷ್ಟೋ ಕಲಾವಿದೆಯರು ಈ ಸಂಸ್ಥೆದಲ್ಲಿ ಇದ್ದಾರೆ.

ಕರ್ನಾಟಕ ಮಾತ್ರವಲ್ಲದೇ, ಕಡಲಿನಾಚೆಗೂ ಯಕ್ಷಗಾನ ಕಲೆಯನ್ನು ಕೊಂಡೊಯ್ದಿದ್ದಾರೆ. ಚೀನಾದ ನಂಜಿಂಗ್‌ನ ಒಲಂಪಿಕ್ಸ್ ಸ್ಟೇಡಿಯಂ, ಅಮೇರಿಕಾದ ಅಕ್ಕ ಸಮ್ಮೇಳನ, ಲಾಸ್ ಎಂಜಲೀಸ್, ಜರ್ಮನಿಯ ಬರ್ಲಿನ್, ದುಬೈ ಎಕ್ಸ್ಪೋ-2020 ಸೇರಿದಂತೆ, ಭಾರತದ ನಾನಾ ಭಾಗಗಳಲ್ಲೂ ಕಾರ್ಯಕ್ರಮ ಕೂಡ ನೀಡಿದ್ದಾರೆ. ಮಂಡಿ, ಬೀದರ್, ಚಂಡೀಗಡ, ತಂಜಾವೂರು, ಒಡಿಸ್ಸಾ, ಚೆನೈ, ದೆಹಲಿ, ಶ್ರವಣಬೆಳಗೊಳ, ಹಂಪಿ ಉತ್ಸವ, ಜಾನಪದ ಜಾತ್ರೆ, ಬೆಂಗಳೂರು ಹಬ್ಬ, ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ, ಮೈಸೂರು ಉತ್ಸವ ಸೇರಿದಂತೆ ಅಖಿಲ ಕರ್ನಾಟಕ ಜೈನ ಮಹಿಳಾ ಉತ್ಸವ, ಸಹ್ಯಾದ್ರಿ ಉತ್ಸವ, ಸುವರ್ಣ ಕರ್ನಾಟಕ ಉತ್ಸವ, ಮಹಿಳಾ ಯಕ್ಷಗಾನ ಉತ್ಸವ, ಮೈಸೂರು ದಸರಾ ಹೀಗೆ ಹೇಳುತ್ತಾ ಹೋದರೆ ಇವರು ನೀಡಿದ ಕಾರ್ಯಕ್ರಮದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇದಲ್ಲದೇ ಆಕಾಶವಾಣಿ, ದೂರದರ್ಶನದಲ್ಲೂ ಇವರ ಕಾರ್ಯಕ್ರಮ ಪ್ರಸಾರವಾಗಿ, ವೀಕ್ಷಕರ ಮೆಚ್ಚುಗೆಯ ಮಾತಿಗೆ ಸಾಕ್ಷಿಯಾಗಿದೆ. ICCR ಎಂಪಾಲ್ ಮೆಂಟ್‌ನಲ್ಲಿರುವ ಏಕೈಕ ಮಹಿಳಾ ಯಕ್ಷಗಾನ ತಂಡ ಎಂಬ ಖ್ಯಾತಿಯನ್ನ ಪಡೆದುಕೊಂಡಿದೆ. ಪಾರಂಪರಿಕ ರಂಗ ಕಲೆಗಳ ಅನನ್ಯತೆ, ನೈಜತೆ, ಶ್ರೇಷ್ಠತೆಗೆ ಯಾವುದೇ ಕುತ್ತು ಬಾರದಂತೆ ಪಾರಂಪರಿಕ ಪ್ರಸಂಗದ ಜತೆಗೆ ವೇಷಭೂಷಣಗಳನ್ನು ರಂಗದಲ್ಲಿ ವಿಜೃಂಭಿಸುವ ಚಾಕಚಕ್ಯತೆಯನ್ನು ಈ ಮಹಿಳಾ ತಂಡ ಹೊಂದಿದೆ. ಮಹಿಳೆಯರು ಮನಸ್ಸು ಮಾಡಿದರೆ ಏನೂ ಕೂಡ ಸಾಧಿಸಬಲ್ಲರು ಎಂದು ತೋರಿಸುವಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ ಕೂಡ ಒಂದಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version