ಕಾರವಾರ: ವಿಶ್ವ ಕ್ಯಾನ್ಸರ್ ದಿನದ (World Cancer Day) ಅಂಗವಾಗಿ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸಲು ಫೆ.5 ರಂದು ಭಟ್ಕಳದಲ್ಲಿ ಪ್ರಥಮ ಬಾರಿಗೆ 5 ಕಿ.ಮೀ. ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿದೆ ಎಂದು ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ್ ನಾಯ್ಕ ಹೇಳಿದರು.
ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ (ಜ.೨೫) ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಭಟ್ಕಳದ ಕ್ರಿಯಾಶೀಲ ಗೆಳೆಯ ಸಂಘ ಮತ್ತು ಭಟ್ಕಳ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಭಟ್ಕಳ ತಾಲೂಕು ಆರೋಗ್ಯ ಇಲಾಖೆ, ವಿವಿಧ ಸರ್ಕಾರಿ ಇಲಾಖೆ ಸೇರಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮ್ಯಾರಥಾನ್ ಓಟವನ್ನು ಭಟ್ಕಳದಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಭಟ್ಕಳದ ಎಲ್ಲ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದರು.
ಇದನ್ನೂ ಓದಿ | Panchamasali Reservation : ಮೀಸಲಾತಿ ನೀಡದಿದ್ದರೆ 224 ಕ್ಷೇತ್ರದಲ್ಲೂ ಪ್ರವಾಸ : ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಸರ್ಪನಕಟ್ಟೆಯ ಸರ್ಕಾರಿ ಪಿ.ಯು. ಕಾಲೇಜಿನ ಮೈದಾನದಿಂದ ಮ್ಯಾರಥಾನ್ ಓಟ ಬೆಳಗ್ಗೆ 6.30ಕ್ಕೆ ಪ್ರಾರಂಭಗೊಂಡು ಭಟ್ಕಳದ ಪೊಲೀಸ್ ಮೈದಾನದಲ್ಲಿ ಕೊನೆಗೊಳ್ಳಲಿದೆ. ಮ್ಯಾರಥಾನ್ ಓಟದಲ್ಲಿ 5 ರಿಂದ 15 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ 1.5 ಕಿ.ಮೀ. 16 ರಿಂದ 35 ವರ್ಷದವರು ಮತ್ತು 36 ರಿಂದ 50 ವರ್ಷದವರೆಗಿನವರಿಗೆ 5.5. ಕಿ.ಮೀ ಹಾಗೂ 50ಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 1.5 ಕಿ.ಮೀ. ಓಟವನ್ನು ಏರ್ಪಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ತಲಾ ಮೂರು ಬಹುಮಾನವನ್ನು ಆಯೋಜಿಸಲಾಗಿದೆ. ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳುವವರು ಮೊದಲು ನೋಂದಣಿ ಫಾರ್ಮ್ ತುಂಬಿ ಸಂಘಟಕರಿಗೆ ಜ. 31ರ ಒಳಗೆ ನೀಡಬೇಕೆಂದು ವಿನಂತಿಸಿದರು.
ಇದನ್ನೂ ಓದಿ | Tech Layoffs: 3900 ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್ ನೀಡಲು ಮುಂದಾದ ಐಬಿಎಂ
ಜೆ.ಸಿ.ಐ. ಸಂಘಟನೆಯ ಪ್ರಮುಖರಾದ ರಮೇಶ ಖಾರ್ವಿ ಮಾತನಾಡಿ, ಭಟ್ಕಳದಲ್ಲಿ ಎಲ್ಲ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಕೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭಟ್ಕಳದ ಎಲ್ಲ ಧರ್ಮದವರೂ ಸೇರಿ ಈ ಓಟದಲ್ಲಿ ಪಾಲ್ಗೊಂಡು ಸೌಹಾರ್ದ ವಾತಾವರಣ ಮೂಡಿಸುವ ಕಾರ್ಯಕ್ರಮ ಇದಾಗಲಿದೆ ಎಂದರು.
ಇದನ್ನೂ ಓದಿ | WPL 2023: ವುಮೆನ್ಸ್ ಐಪಿಎಲ್ಗೆ ಹೊಸ ಹೆಸರಿಟ್ಟ ಬಿಸಿಸಿಐ
ಪತ್ರಿಕಾಗೋಷ್ಠಿಯಲ್ಲಿ ಸ್ಪಂದನ ಚಾರಿಟೆಬಲ್ ಟ್ರಸ್ಟ್‌ನ ಪ್ರಮುಖರಾದ ಭವಾನಿ ಶಂಕರ, ಕುದುರೆ ಬೀರಪ್ಪ ಯುವಕ ಸಂಘದ ಪ್ರಮುಖ ಅರುಣ ಕುಮಾರ, ವಿನಾಯಕ ನಾಯ್ಕ, ಪಾಂಡುರಂಗ ನಾಯ್ಕ, ಪತ್ರಕರ್ತ ಮನಮೋಹನ ನಾಯ್ಕ, ಪವನ ಕುಮಾರ, ಶ್ರೀಕಾಂತ ನಾಯ್ಕ, ಪಾಂಡು ನಾಯ್ಕ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಮಾರ್ಗದ ಮಾಹಿತಿ ಕಾರ್ಡ್ ಬಿಡುಗಡೆ ಮಾಡಲಾಯಿತು.