ಆನೇಕಲ್: ವಿಶ್ವ ಪರಿಸರ ದಿನಾಚರಣೆ (World Environment Day 2023) ಅಂಗವಾಗಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಶ್ರೀ ಕೃಷ್ಣ ಕಾಲೇಜು ವತಿಯಿಂದ ಪರಿಸರ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ವಿಸ್ತಾರ ನ್ಯೂಸ್ ಹಾಗೂ ಬನ್ನೇರುಘಟ್ಟ ಪೊಲೀಸರ ಸಹಯೋಗದೊಂದಿಗೆ ನಡೆದ ಜಾಗೃತಿ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಬನ್ನೇರುಘಟ್ಟ ಪೊಲೀಸ್ ಠಾಣಾ ಆವರಣದಲ್ಲಿ ಗಿಡ ನೆಡುವ ಮೂಲಕ ಜಾಥಾಗೆ ಪೊಲೀಸ್ ಇನ್ಸ್‌ಪೆಕ್ಟರ್ ಉಮಾಮಹೇಶ್ ಚಾಲನೆ ನೀಡಿದರು. ಬಳಿಕ ಠಾಣೆಯಿಂದ ಶ್ರೀಕೃಷ್ಣ ಕಾಲೇಜಿನವರೆಗೆ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು. ರಸ್ತೆಯುದ್ದಕ್ಕೂ ವಿದ್ಯಾರ್ಥಿಗಳು ಕೈಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಪರಿಸರವೇ ಜೀವನಾಧಾರವಾಗಿದ್ದು ಕಾಲಹರಣ ಮಾಡದೆ ಅದನ್ನೂ ರಕ್ಷಿಸುವ ಕೆಲಸವನ್ನು ಒಟ್ಟಿಗೆ ಮಾಡೋಣ. ಗಾಳಿ, ನೀರು, ಭೂಮಿ,ಆಕಾಶವನ್ನು ವಿನಾಶ ಮಾಡದಿರಿ, ಅರಣ್ಯ ಉಳಿಸಿ ಭವಿಷ್ಯ ಬೆಳಗಿಸಿ ಎಂದು ಮನವಿ ಮಾಡಿದರು. ಮುಂದಿನ ಪೀಳಿಗೆಗಾಗಿ ಇರುವುದೊಂದೆ ಭೂಮಿ, ಇದನ್ನೂ ರಕ್ಷಿಸಿ ಸ್ವಾಮಿ ಎಂದು ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.
ಇದನ್ನೂ ಓದಿ: ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
ಇದೇ ವೇಳೆ ಮಾತನಾಡಿದ ಶ್ರೀಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ಹರಿಕುಮಾರ್ ಅವರು, ಪರಿಸರದ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಕೃಷ್ಣ ಕಾಲೇಜಿನ ಜತೆಗೆ ಪರಿಸರ ಪ್ರೇಮಿ ದಾವಲ್ ಸಾಬ್ ಅಣ್ಣೀಗೆರೆಯವರು ಗಿಡಗಳನ್ನು ಉಚಿತವಾಗಿ ನೀಡಿದ್ದಾರೆ. ಅದೇ ರೀತಿ ವಿಸ್ತಾರ ನ್ಯೂಸ್ ಹಾಗೂ ಬನ್ನೇರುಘಟ್ಟ ಪೊಲೀಸರ ಸಹಯೋಗದೊಂದಿಗೆ ಈ ಜಾಗೃತಿ ಜಾಥಾ ಯಶಸ್ವಿಯಾಗಿ ನಡೆದಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ