Site icon Vistara News

Eurasian griffin | ಹೊಸಪೇಟೆಯಲ್ಲಿ ಸಿಕ್ಕಿದ ಅಪರೂಪದ ಯುರೇಷಿಯನ್‌ ರಣಹದ್ದು ಮರಳಿ ಬಾನಿಗೆ

vulture

ವಿಜಯನಗರ: ಕಳೆದ ತಿಂಗಳು ಹೊಸಪೇಟೆಯ ರಾಣಿಪೇಟೆಯ ಶಾಲಾ ಮಕ್ಕಳ ಕೈಗೆ ಸಿಕ್ಕಿದ್ದ ಅಪರೂಪದ ಯೂರೇಷಿಯನ್ ರಣಹದ್ದು ಮರಳಿ ನಿಸರ್ಗ ಸೇರಿದೆ.

ಕಳೆದ ಡಿಸೆಂಬರ್‌ನಲ್ಲಿ ರಾಣಿಪೇಟೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಹುಡುಗರ ಕಣ್ಣಿಗೆ ಕಾಣಸಿಕ್ಕ‌ ಯೂರೇಷಿಯನ್ ಗ್ರಿಫನ್‌ ಜಾತಿಯ ರಣಹದ್ದನ್ನು ಪತ್ರಕರ್ತ‌‌ ಹಾಗೂ ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅವರು ರಕ್ಷಿಸಿ, ತಾಲ್ಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕಿಗೆ ಹಸ್ತಾಂತರ ಮಾಡಿದ್ದರು. ಮೃಗಾಲಯದ ತಜ್ಞ ಪಶುವೈದ್ಯೆ ಡಾ.ವಾಣಿ ಅವರು, ಅಸ್ವಸ್ಥ ಸ್ಥಿತಿಯಲ್ಲಿದ್ದ ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಚೇತರಿಸಿಕೊಂಡ ಪಕ್ಷಿಯನ್ನು ತಾಲೂಕಿನ ಇಂಗಳಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಹಾರಿ ಬಿಟ್ಟು ಮುಕ್ತಗೊಳಿಸಲಾಯಿತು.

ವನ್ಯಜೀವಿ ಸಂಶೋಧಕ ಡಾ.ಸಮದ್‌‌‌‌ ಕೊಟ್ಟೂರು ಅವರು ರಾಷ್ಟೀಯ ರಣಹದ್ದು ತಜ್ಞರನ್ನು ಸಂಪರ್ಕಿಸಿ, ಅಪರೂಪವಾಗಿ ಕಂಡು ಬಂದ ರಣಹದ್ದಿನ ನೈಜಗುರುತನ್ನು ಪತ್ತೆ ಮಾಡಿದ್ದರು. ಬೃಹತ್ ಗಾತ್ರದ ಪಕ್ಷಿಯ ಎತ್ತರ, ಗಾತ್ರ, ತೂಕ, ಗರಿಗಳ ಬಣ್ಣ, ಮುಂತಾದವನ್ನು ಪರೀಕ್ಷಿಸಿ, ಇದು ಒಂದು ವರ್ಷ ವಯೋಮಾನದ ಯೂರೋಪಿಯನ್ ಗ್ರಿಫನ್ ಎಂಬ ರಣಹದ್ದು ಎಂಬುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ | ಕಾಣೆಯಾದ ಪ್ರೀತಿಯ ಗಿಣಿ, ಹುಡುಕಿ ಕೊಟ್ಟವರಿಗೆ ₹ 80,000 ಬಹುಮಾನ, ಸಿಕ್ಕ ನಂತರ ಮೃಗಾಲಯಕ್ಕೆ ದಾನ!

ಹೆಚ್ಚಾಗಿ ಉತ್ತರ ಭಾರತದಲ್ಲಿ ಕಂಡು ಬರುವ ಈ ರಣಹದ್ದುಗಳು ದಕ್ಷಿಣ ಭಾರತಕ್ಕೆ ವಲಸೆ ಬಂದಾಗ ಕೆಲವೊಮ್ಮೆ ನಿರ್ಜಲೀಕರಣದಿಂದ ಬಸವಳಿದು ನೆಲಕ್ಕೆ ಬೀಳುವುದನ್ನು ಕಾಣುತ್ತೇವೆ. ಕೇರಳ, ಮಹಾರಾಷ್ಟ್ರ ಮತ್ತು‌ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿ ರಣಹದ್ದುಗಳು ಬಸವಳಿದು ನೆಲಕ್ಕೆ ಬಿದ್ದಿರುವ ಪ್ರಸಂಗಗಳು ಕಂಡುಬಂದಿವೆ. ಅವುಗಳನ್ನು ಸಂರಕ್ಷಿಸಿ, ಚಿಕಿತ್ಸೆ ನೀಡಿ ಅವು ಚೇತರಿಸಿಕೊಂಡ ಬಳಿಕ ಮರಳಿ ಹಾರಿಬಿಡಲಾಗುತ್ತದೆ. ಅದೇ ರೀತಿ ಈ ರಣಹದ್ದನ್ನು ಕೂಡ ಇಂಗಳಗಿ ಗ್ರಾಮದ ಬಳಿಯ ಎತ್ತರದ ಬೆಟ್ಟದ‌ ತುದಿಯಲ್ಲಿ‌ ಪೆಟ್ಟಿಗೆಯಿಂದ ಹೊರಬಿಟ್ಟು ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸಲು ಅವಕಾಶ ನೀಡಲಾಯಿತು. ಅರ್ಧಗಂಟೆಗೂ ಹೆಚ್ಚು ಕಾಲ ಬೆಟ್ಟದ ಮೇಲೆ ಹಾರಾಡಿದ ರಣಹದ್ದು ಸುಲಲಿತವಾಗಿ ಉತ್ತರ ದಿಕ್ಕಿನ‌ ಕಡೆ ಹಾರಿ ಕಣ್ಮರೆಯಾಯಿತು. ಈ ರಣಹದ್ದಿನ ಕಾಲಿಗೆ ವಿಶೇಷ ಗುರುತಿನ ನೀಲಿ ಬಣ್ಣದ ಉಂಗುರವನ್ನು ಹಾಕಲಾಗಿದೆ. ಉಂಗುರದ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ ಸಿಯು, ಸಿಯು ಎಂದು ಮುದ್ರಿಸಲಾಗಿದೆ. ಇದ‌ನ್ನು ಆಧರಿಸಿ ಮುಂದೊಂದು ದಿನ ರಣಹದ್ದು ಹೊಸಪೇಟೆಯ ಪ್ರದೇಶದಲ್ಲಿ ಕಾಣಿಸಿಕೊಂಡು‌ ರಕ್ಷಿಸಲ್ಪಟ್ಟಿತ್ತು ಎಂಬುದನ್ನು ಸುಲಭವಾಗಿ ಗುರುತಿಸಬಹುದು ಎಂದು ಡಾ.‌ ಸಮದ್ ಕೊಟ್ಟೂರು ಮಾಹಿತಿ‌ ನೀಡಿದರು.

ಈ ಸಂದರ್ಭದಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ಕಿರಣ್, ತಜ್ಞ ಪಶುವೈದ್ಯೆ ಡಾ.ವಾಣಿ, ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು, ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ ಹಾಗೂ ಮೃಗಾಲಯದ ಸಿಬ್ಬಂದಿ ಇದ್ದರು.

ಇದನ್ನೂ ಓದಿ | Gadaga zoo | ಗದಗ ಮೃಗಾಲಯದಿಂದ ಒಂದು ತೋಳ ಹೋಗಿ ಎರಡು ಸಿಂಹ ಬಂತು: ಶಿವ-ಗಂಗಾ ಜೋಡಿ ಗರ್ಜನೆಗೆ ರೆಡಿ!

Exit mobile version