ಯಾದಗಿರಿ: ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ವಿವಾದ ಹಿನ್ನೆಲೆಯಲ್ಲಿ ನಗರದ ಗಂಜ್ ಸರ್ಕಲ್‌ನಲ್ಲಿ ಬಿಗುವಿನ ವಾತಾವಾರಣ ಏರ್ಪಟ್ಟಿದೆ. ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಕೋಲಿ ಸಮುದಾಯದಿಂದ ವಿರೋಧ ವ್ಯಕ್ತವಾಗಿದ್ದರಿಂದ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶನಿವಾರ ಬೆಳಗ್ಗೆ ನಗರಸಭೆಯ ಗಾರ್ಡನ್ ಜಾಗದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲು ಶಾಸಕ ವೆಂಕಟರೆಡ್ಡಿ ಮುದ್ನಾಳ ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೋಲಿ ಸಮಾಜದ ಮುಖಂಡರು, ಗಾರ್ಡನ್ ಜಾಗದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು, ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಆಗ್ರಹಿಸಿದರು.
ಇದನ್ನೂ ಓದಿ | ಪೋಕ್ಸೊಪ್ರಕರಣ; ಅನಾಥ ಸೇವಾಶ್ರಮ ಸಮಿತಿ ಅಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ವಿಮುಕ್ತಿ
ಈ ವೇಳೆ ಭೂಮಿಪೂಜೆಗೆ ಅನುವು ಮಾಡಿಕೊಡುವಂತೆ ಶಾಸಕರು ಮನವೊಲಿಸಿದರೂ ಕೋಲಿ ಸಮಾಜದ ಜನರು ನಿರಾಕರಿಸಿ ಆಕ್ರೋಶ ಹೊರಹಾಕಿದರು. ನಂತರ ಸ್ಥಳಕ್ಕೆ ಲಿಂಗಾಯತ ಸಮಾಜ ಹಾಗೂ ಕೊಲಿ ಸಮಾಜದ ನೂರಾರು ಜನ ಜಮಾಯಿಸಿದ್ದರಿಂದ ಉದ್ವಿಗ್ನ ವಾತಾವರಣ ಏರ್ಪಟ್ಟಿತ್ತು.
ಶಾಸಕ ವೆಂಕಟರೆಡ್ಡಿ ಮುದ್ನಾಳ್ ಭೂಮಿ ಪೂಜೆ ಮಾಡಿಯೇ ಮಾಡುವೆವು ಎಂದು ಪಟ್ಟು ಹಿಡಿದಿದ್ದರು. ಆದರೆ ಕೋಲಿ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿಸಿ ಸ್ನೇಹಲ್ ಆರ್, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಆಗಮಿಸಿ , ಶಾಸಕ ವೆಂಕಟರೆಡ್ಡಿ ಮುದ್ನಾಳ್ ಜತೆ ಮಾತುಕತೆ ನಡೆಸಿ ಭೂಮಿಪೂಜೆ ಕಾರ್ಯಕ್ರಮ ಮುಂದೂಡಿ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ತಾರ್ಕಿಕ ಅಂತ್ಯ ಕಂಡ ವಿವಾದ
ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಡಿಸಿ ಸ್ನೇಹಲ್ ಆರ್, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ನಗರಸಭೆ ಆಯುಕ್ತರ ನೇತೃತ್ವದಲ್ಲಿ ನಡೆದ ಲಿಂಗಾಯತ ಹಾಗೂ ಕೋಲಿ ಸಮುದಾಯದ ಮುಖಂಡರ ಸಭೆ ಸಂಧಾನ ಯಶಸ್ವಿಯಾಗಿದೆ.
ಯಾದಗಿರಿಯ ಗಂಜ್ ಸರ್ಕಲ್ ಬಳಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ನಗರಸಭೆಯಿಂದ ಉದ್ದೇಶಿಸಲಾಗಿತ್ತು. ಆದರೆ ಇದನ್ನು ವಿರೋಧಿಸಿ ಬಿಜೆಪಿ ನಾಯಕಿ ಲಲಿತಾ ಅನಪೂರ ಹಾಗೂ ಕೋಲಿ ಸಮುದಾಯ ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಹೀಗಾಗಿ ಶಾಸಕರು ಹಾಗೂ ಕೋಲಿ ಸಮುದಾಯದ ಮುಖಂಡರ ಜತೆ ಜಿಲ್ಲಾ ಎಸ್ಪಿ ಡಾ.ವೇದಮೂರ್ತಿ, ಡಿಸಿ ಸ್ನೇಹಾಲ್ ಪ್ರತ್ಯೇಕ ಸಭೆ ನಡೆಸಿ ಮನವೊಲಿಸಿದ್ದು, ಸೋಮವಾರ ನಡೆಯುವ ಸಭೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಅಂತಿಮ ತೀರ್ಮಾನ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಸಿಂದಗಿಯಲ್ಲಿ ಕುಸಿದ ಗಣೇಶೋತ್ಸವ ಮಂಟಪ; 6 ಕ್ಕೂ ಹೆಚ್ಚು ಮಂದಿಗೆ ಗಾಯ