ಯಾದಗಿರಿ: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ವಿವಿಧ ರೀತಿಯ ಕೈಗಾರಿಕೆಗಳ (Industries) ಸ್ಥಾಪನೆಗೆ ಕೈಗಾರಿಕೋದ್ಯಮಿಗಳು (Industrialists) ಮುಂದೆ ಬಂದಲ್ಲಿ, ಉದ್ಯೋಗ ಸೃಷ್ಟಿಗೆ ನೆರವಾಗುವ ಜತೆಗೆ ಈ ಭಾಗದ ಅಭಿವೃದ್ಧಿಗೂ (Development) ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಿಡ್ಬಿ ಹಾಗೂ ಕಾಸಿಯಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲ ರೀತಿಯ ಕೈಗಾರಿಕೆಗಳ ಸ್ಥಾಪನೆಯ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಕೈಗಾರಿಕೋದ್ಯಮಿಗಳು ಈ ಭಾಗದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುವಂತೆ ಅವರು ಕರೆ ನೀಡಿದರು.
ಇದನ್ನೂ ಓದಿ: WordPad: ವರ್ಡ್‌ಪ್ಯಾಡ್ ಇನ್ನಿಲ್ಲ! 30 ವರ್ಷಗಳ ಉಚಿತ ಸೌಲಭ್ಯವನ್ನು ಕೊನೆಗೊಳಿಸಲಿರುವ ಮೈಕ್ರೋಸಾಫ್ಟ್
ರಾಷ್ಟ್ರ ಹಾಗೂ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ನೆರವು ಒದಗಿಸಲಾಗುತ್ತಿದೆ. ಅದರಂತೆ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೂ ಹಣಕಾಸಿನ ಮತ್ತು ಇತರೆ ಕೊರತೆ ಇರುವುದರಿಂದ ಹಂತ ಹಂತವಾಗಿ ಇಂತಹ ಕೈಗಾರಿಕೆಗಳನ್ನು ಸ್ಥಾಪಿಸಿ ನಿಗದಿತ ಗುರಿ ತಲುಪಬೇಕು. ಬ್ಯಾಂಕ್‌ಗಳೂ ಕೂಡ ಸಣ್ಣ ಕೈಗಾರಿಕೋದ್ಯಮಿಗಳಿಗೆ ವಿಳಂಬ ಧೋರಣೆ ಅನುಸರಿಸದೆ, ಆದ್ಯತೆ ಮೇಲೆ ಅವರಿಗೆ ಹಣಕಾಸಿನ ನೆರವು ಒದಗಿಸಲು ಮುಂದಾಗಬೇಕು. ಇದರಿಂದ ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಿ, ಉದ್ಯೋಗ ಸೃಜನೆ ಹಾಗೂ ಅಭಿವೃದ್ಧಿಗೂ ನೆರವಾಗಲಿದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಲಸೆ ಹೋಗುವ ಸಮಸ್ಯೆ ಹಾಗೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು ಎಂದ ಅವರು, ಸಣ್ಣ ಕೈಗಾರಿಕೆಗಳಿಗೆ ಸ್ಥಾಪನೆಗೆ ಪಡೆದಿರುವಂತಹ ನಿವೇಶನಗಳು ಮೂಲ ಉದ್ದೇಶಕ್ಕೆ ಮಾತ್ರ ಬಳಕೆಯಾಗಬೇಕು, ಇದನ್ನು ಹೊರತು ರಿಯಲ್ ಎಸ್ಟೇಟ್ ವ್ಯವಹಾರ ಆಗಬಾರದು ಎಂದು ತಿಳಿಸಿದ ಅವರು, ಮೂಲ ಉದ್ದೇಶದಿಂದ ಆರಂಭಗೊಳ್ಳದೆ ಇರುವಂತಹ ಕೈಗಾರಿಕೆ ಗಳು ಮುಚ್ಚಿ ಹೋದಲ್ಲಿ ಉದ್ಯೋಗ ಕ್ಕೆ ಕೊಡಲಿ ಪೆಟ್ಟು ಬೀಳುವ ಸಾಧ್ಯತೆ ಇರುವುದರಿಂದ ಹೆಚ್ಚು ಹೆಚ್ಚು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕೋದ್ಯಮಿಗಳು ಮುತುವರ್ಜಿ ವಹಿಸುವಂತೆ ತಿಳಿಸಿದರು.
ಯಾದಗಿರಿಯಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಗಳ ಸವಲತ್ತುಗಳು ಮತ್ತು ಹಣಕಾಸಿನ ನೆರವು ಕುರಿತು ಕಾಸಿಯಾ, ಸಿಡ್ಬಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳು ಮುಂದೆ ಬಂದಿರುವುದು ಈ ಭಾಗದ ಕೈಗಾರಿಕೋದ್ಯಮಿಗಳಿಗೆ ಹಾಗೂ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
ಉದ್ಯಮಗಳ ಸ್ಥಾಪನೆಗೆ ಹಣಕಾಸಿನ ನೆರವು, ಸಹಾಯಧನ, ಕೈಗಾರಿಕೆ ಅಭಿವೃದ್ಧಿಗೆ ಹಾಗೂ ಮಾರುಕಟ್ಟೆಗಳ ವ್ಯವಸ್ಥೆ ಕುರಿತಂತೆ ಅರಿವು ಮೂಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Flipkart: ಫ್ಲಿಪ್‌ಕಾರ್ಟ್‌ನ 10ನೇ ಆವೃತ್ತಿಯ ಬಿಗ್ ಬಿಲಿಯನ್ ಡೇಸ್‌ಗೆ ಒಂದು ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ!
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ರೇಖಾ ಮ್ಯಾಗೇರಿ ಮಾತನಾಡಿ, ಈಗಾಗಲೆ ಕೈಗಾರಿಕಾ ಪ್ರದೇಶ ಕಡೆಚೂರು ಭಾಗದಲ್ಲಿ ಮೊದಲ ಹಂತದಲ್ಲಿ 65 ಫಾರ್ಮಾ ಕೈಗಾರಿಕೆಗಳು ಬರುತ್ತಿವೆ. 35 ಸ್ಥಾಪನೆಯಾಗಿದ್ದು, 8 ಕಾರ್ಯಾರಂಭಗೊಂಡಿವೆ. ಅದರಂತೆ ಮುಂಡರಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಿದೆ. ಸದ್ಯ ಅತಿ ಮುಖ್ಯವಾಗಿ “ಆಶನಾಳ ಪ್ರದೇಶ” ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಅನುಕೂಲವಾಗುವದರಿಂದ ಈ ಪ್ರದೇಶ ಮೀಸಲಿಡಲು ಸಚಿವರಲ್ಲಿ ಅವರು ಕೋರಿದರು.
ಅದರಂತೆ ಕೈಗಾರಿಕಾ ನೀತಿ 2025 ಅಡಿಯಲ್ಲಿ ಆಟೋಮೊಬೈಲ್ ಘಟಕ ಸೇರ್ಪಡಿಸುವ ಅವಶ್ಯಕತೆ ಇದೆ. ಕೈಗಾರಿಕೆ ಇಲಾಖೆಯಿಂದ ಈ ನೀತಿಯಡಿ ಅತಿ ಸಣ್ಣ ಕೈಗಾರಿಕೆ ಗಳ ಸ್ಥಾಪನೆಗೆ ಸಹಾಯಧನ ಸೌಲಭ್ಯ ಸಹ ನೀಡುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನೂ ಓದಿ: Heart Attack : ಬಿಇಒ ಕಚೇರಿ SDAಗೆ ಹೃದಯಾಘಾತ; ಹಿರಿಯ ಅಧಿಕಾರಿ ಕಿರುಕುಳ ಕಾರಣ ಎಂದು ಶವ ಇಟ್ಟು ಪ್ರತಿಭಟನೆ
ಈ ವೇಳೆ ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ವ್ಯವಸ್ಥಾಪಕ ನಿರ್ದೇಶಕ ಮಹೇಶ್.ಬಿ, ಕಾಸಿಯಾದ ಅಧ್ಯಕ್ಷ ಸಿಎ ಶಶಿಧರ್ ಶೆಟ್ಟಿ, ಬೆಂಗಳೂರು ಪ್ರಾದೇಶಿಕ ಕಚೇರಿ ಸಿಡ್ಬಿ ಯ ಉಪ ಪ್ರಧಾನ ವ್ಯವಸ್ಥಾಪಕ ಬಿ.ಉಲಗಿಯನ್, ಯಾದಗಿರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ದಿನೇಶ್ ಕುಮಾರ ಜೈನ್, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ, ನಗರ ಜಂಟಿ ಕಾರ್ಯದರ್ಶಿ ಶ್ರೇಯಾನ್ಸ್ ಕುಮಾರ ಜೈನ್, ಕಾಸಿಯಾದ ಜಿಎಸ್ಟಿ ಪ್ಯಾನಲ್ ಚೇರ್ಮನ್ ಉಮಾಶಂಕರ್, ಜೆ.ಸಿ.ಸಿ.ಟಿ ಬಾಲಸ್ವಾಮಿ, ಉಪಾಧ್ಯಕ್ಷ ಎಂ.ಜಿ.ರಾಜಗೋಪಾಲ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಅರುಣ್ ಪಡಿಯಾರ್ ಎನ್, ಖಜಾಂಚಿ ಎಚ್.ಕೆ ಮಲ್ಲೇಶಗೌಡ, ಯಾದಗಿರಿ ಜಿಲ್ಲೆ ಅಭಿವೃದ್ಧಿ ಸಮಿತಿಯ ಉಪ ಸಮಿತಿ ಅಧ್ಯಕ್ಷ ಭೀಮಾಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.