Site icon Vistara News

Yadgiri News: ಕಷ್ಟಪಟ್ಟು ಶ್ರದ್ಧೆಯಿಂದ ಓದಿದರೆ ಸಾಧನೆ ಕಷ್ಟವಲ್ಲ: ಡಿಸಿ ಡಾ. ಸುಶೀಲಾ

Success comes when you face a competitive exam with hard work and dedication says Yadgiri DC Dr Susheela

ಯಾದಗಿರಿ: ಕಷ್ಟಪಟ್ಟು ಶ್ರದ್ಧೆಯಿಂದ ಓದಿದರೆ ಸಾಧನೆ (Achievement) ಕಷ್ಟವೇ ಅಲ್ಲ, ಜೀವನದಲ್ಲಿನ ಕನಸು (Dream) ನನಸಾಗಬೇಕೆಂದರೆ ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಸ್ಪರ್ಧಾತ್ಮಕ ಪರೀಕ್ಷೆ (Competitive Exam) ಎದುರಿಸಿದಾಗ ಮಾತ್ರ ಯಶಸ್ಸು (Success) ಸಿಗಲು ಸಾಧ್ಯವಾಗುತ್ತದೆ ಎಂಬುದಕ್ಕೆ ನಿಮಗೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ನಗರದ ಮುದ್ನಾಳ್ ಕ್ರಾಸ್ ಬಳಿ ಇರುವ ಕನ್ನಡ ಭವನದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಮನೆಯಲ್ಲಿ ಬಡತನವಿದೆ ಎಂದು ಯಾರು ನಿರಾಶೆಯಾಗಬಾರದು. ಸಾಧಿಸುವ ಹಂಬಲವಿದ್ದರೆ ಯಾವುದೂ ಅಸಾಧ್ಯವಲ್ಲ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಾಧನೆ ಮಾಡಬಹುದಾಗಿದೆ. ಯಾವುದೇ ಗುರಿ ತಪ್ಪಲ್ಲ. ಆದರೆ ಆ ನಿಮ್ಮ ಗುರಿ ದೊಡ್ಡದಾಗಿರಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಕನಸು ಕಾಣಬೇಕಾದರೆ ಅದಕ್ಕೆ ಯಾವುದೇ ರೀತಿಯಾಗಿ ಬಾರ್ಡರ್ ( ಸೀಮೆ) ಮಿತಿ ಇರುವುದಿಲ್ಲ.

ಇದನ್ನೂ ಓದಿ: ‘ಭಾರತದಿಂದ ಉತ್ತಮ ಉಡುಗೊರೆ ಸಿಕ್ಕಿದೆ’; ಕಳಪೆ ಪ್ರದರ್ಶನಕ್ಕೆ ಪಾಕ್​ ಕೋಚ್​ ಅಸಮಾಧಾನ

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯಬೇಕಾದರೆ ನಗರದಲ್ಲಿನ ಶ್ರೀಮಂತರು ಮಾತ್ರ ಬರೆಯುತ್ತಾರೆ ಎಂಬ ಮಾನಸಿಕ ಕಲ್ಪನೆಯಿಂದ ಎಲ್ಲರೂ ಹೊರಗೆ ಬರಬೇಕಾಗಿದೆ. ನಾನು ಸಹ ಹಳ್ಳಿಯಿಂದ ಬಂದಿದ್ದೇನೆ ಅದರಲ್ಲಿಯೂ ತಾಂಡದಿಂದ ಶಾಲೆಗೆ ನಡೆದುಕೊಂಡು ಹೋಗಿ ಶಿಕ್ಷಣ ಪಡೆದಿದ್ದೇನೆ ಎಂದು ತಮ್ಮ ಬಾಲ್ಯದ ನೆನೆಪನ್ನು ವಿದ್ಯಾರ್ಥಿಗಳಿಗೆ ಹೇಳಿದರು.

ನಾನು ಮೊದಲೆರಡು ಬಾರಿ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಾಗ ಯಶಸ್ಸು ಸಿಕ್ಕಿರಲ್ಲಿಲ್ಲ. ಆದರೆ ನಾನು ಎಂದಿಗೂ ಛಲ ಬಿಡಲಿಲ್ಲ. ನನ್ನ ಗುರಿಯನ್ನು ಸಾಧಿಸಲು ದುಪ್ಪಟ್ಟು ಶ್ರಮಿಸಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದರು.

ಯಾವುದೇ ಸಾಧನೆ ಸುಲಭವಲ್ಲ, ಕಷ್ಟವೂ ಅಲ್ಲ. ಕಠಿಣ ಪರಿಶ್ರಮಪಟ್ಟರೆ ಮಾತ್ರ ಪ್ರತಿಫಲ ಸಿಗುತ್ತದೆ. ಮಹಿಳೆಯರು ಮದುವೆಯಾದ ಮೇಲೆ ಸಾಧನೆ ಮಾಡಲು ಅವಕಾಶ ಮುಗೀತು ಎಂದು ಕೊಳ್ಳಬಾರದು ಈ ರೀತಿ ನಾನು ಅಂದು ಕೊಂಡಿದ್ದರೆ ನಾನು ಜಿಲ್ಲಾಧಿಕಾರಿಯಾಗಿ ನಿಮ್ಮ ಮುಂದೆ ನಿಲ್ಲುತ್ತಿರಲ್ಲಿಲ್ಲ ಎಂದು ಮನೆಯವರು ನೀಡಿದ ಪ್ರೋತ್ಸಾಹವನ್ನು ಅವರು ನೆನಪಿಸಿಕೊಂಡರು.

ಎಲ್ಲರೂ ಸಮಯ ಪಾಲನೆಯಿಂದ ವಿದ್ಯಾಭ್ಯಾಸ ಮಾಡಿ, ಈ ಕೋಚಿಂಗ್ ಸೌಲಭ್ಯವನ್ನು ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಿಲ್ಲೆಯಿಂದ ಉನ್ನತ ಅಧಿಕಾರಿಗಳಾಗಿ ನೀವು ಹೊರಹೊಮ್ಮುತ್ತೀರಿ ಎಂದು ಜಿಲ್ಲಾಡಳಿತ ನಿರೀಕ್ಷೆ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ನುಡಿದರು.

ಇದನ್ನೂ ಓದಿ: Rohit Sharma: ಸಚಿನ್​ ​ ದಾಖಲೆ ಮುರಿದು 10 ಸಾವಿರ ರನ್​ ಎಲೈಟ್​ ಪಟ್ಟಿ ಸೇರಿದ ರೋಹಿತ್​ ಶರ್ಮ

ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಪ್ರಭುದೊರೆ, ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆ ಅಧಿಕಾರಿ ಪ್ರವೀಣಕುಮಾರ, ಬೆಂಗಳೂರು ಸಾಧನಾ ಕೋಚಿಂಗ್ ಸೆಂಟರ್ ನ ನಿರ್ದೇಶಕಿ ಡಾ.ಜ್ಯೋತಿ ಕೆ.ಸಿ , ಕೌಶಲ್ಯಾಭಿವೃದ್ದಿ ಇಲಾಖೆ ಸಹಾಯಕ ಅಧಿಕಾರಿ ಬಸಪ್ಪ ಎಸ್ ತಳವಾಡಿ, ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಡಾ. ವಿಠೋಬ ಬಿ, ವಿಜಯಕುಮಾರ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version