ಯಾದಗಿರಿ: ತಲೆತಲಾಂತರದಿಂದ ಬಂದಿರುವ ಯೋಗಭ್ಯಾಸವನ್ನು (Yoga) ನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮನಸ್ಸಿನ ಆರೋಗ್ಯ ಸುದೀರ್ಘ ಕಾಲದವರೆಗೆ ಕಾಪಾಡಿಕೊಳ್ಳಬಹುದು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Yadgiri News) ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಪತಂಜಲಿ ಯೋಗ ಸಮಿತಿ ಹಾಗೂ ಸರ್ಕಾರದ ಇತರೆ ಇಲಾಖೆಗಳ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ( ಸಪ್ನ ಗ್ರೌಂಡ್) ನಡೆದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: International Yoga Day 2024: ಸಶಸ್ತ್ರ ಪಡೆಗಳಿಂದ ಮೈಕೊರೆಯುವ ಹಿಮ ಪರ್ವತದಲ್ಲೂ ಯೋಗ ದಿನಾಚರಣೆ; ವಿಡಿಯೊ ನೋಡಿ
ಸ್ವಯಂ ಮತ್ತು ಸಮಾಜದ ಒಳಿತಿಗೆ ಯೋಗ ಎಂಬುದು ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾಗಿದೆ ಎಂದರು. ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನ ಅಭ್ಯಾಸವಾಗಿದೆ. ಅನೇಕ ಋಷಿ ಮುನಿಗಳು, ತಪಸ್ವಿಗಳು, ಧಾರ್ಮಿಕ ಗುರುಗಳು ಯುಗ ಯುಗಾಂತರಗಳಿಂದ ಯೋಗಭ್ಯಾಸ ಮಾಡಿ ದೈಹಿಕ ಮತ್ತು ಮಾನಸಿಕವಾಗಿ ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಗಮನ ಸೆಳೆದ ಯೋಗ ಪ್ರದರ್ಶನ
ಸೂರ್ಯ ಉದಯಿಸುವ ಮುನ್ನವೇ ಯೋಗಪಟುಗಳು ಮೈದಾನದಲ್ಲಿ ಸೇರಿದ್ದರು. ಶಾಲಾ ಕಾಲೇಜು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗಮಿಸಿ ಯೋಗ ದಿನಾಚರಣೆಗೆ ಮೆರಗು ತಂದರು.
ಪತಂಜಲಿಯ ಯೋಗ ಸಮಿತಿಯ ಸಂಚಾಲಕ ಅನಿಲ್ ಗುರೂಜಿ, ಯೋಗಾಸನದ ವಿವಿಧ ಭಂಗಿಗಳನ್ನು ಜನಪ್ರತಿನಿಧಿಗಳು,ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ನಗರದ ನಾಗರಿಕರಿಗೆ ಯೋಗಭ್ಯಾಸ ಮಾಡಿಸಿದರು.
ಯೋಗ ದಿನಾಚರಣೆ ಅಂಗವಾಗಿ ಯೋಗ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಇದನ್ನೂ ಓದಿ: Humanity: ಬಾಲಕಿಯ ಚಿನ್ನದ ಸರ ಮರಳಿಸಿ ಮಾನವೀಯತೆ ಮೆರೆದ ಬಸ್ ಚಾಲಕ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡಿ, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಗಾಳಿ, ಬ್ರಹ್ಮಕುಮಾರಿ ಮುಖ್ಯಸ್ಥೆ ಕು. ವೀಣಾ, ಡಾ. ಪ್ರಕಾಶ ರಾಜಾಪುರ, ಸಂಗಮೇಶ ಕೆಂಭಾವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ಕೌಟ್ಸ್ ಗೈಡ್ಸ್‌ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.